ಮುಂಬರುವ ಎಸ್. ಎಸ್ ಎಲ್. ಸಿ ಪರೀಕ್ಷಾ ಫಲಿತಾಂಶದಲ್ಲಿ ಯಾವೊಬ್ಬ ಹೆಣ್ಣು ಮಗು ಅನುತ್ತೀರ್ಣರಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮುಂಬರುವ ಎಸ್. ಎಸ್ ಎಲ್. ಸಿ ಪರೀಕ್ಷಾ ಫಲಿತಾಂಶದಲ್ಲಿ ಯಾವೊಬ್ಬ ಹೆಣ್ಣು ಮಗು ಅನುತ್ತೀರ್ಣರಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ 2026-27 ನೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಹಾಗೂ ಸಂಕಲನಾತ್ಮಕ ಪರೀಕ್ಷೆ (ಎಸ್ ಎ 1) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹದಂತಹ ಗಂಭೀರ ಸಮಸ್ಯೆ ಇದೆ. ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಗುವಿನ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪುತ್ತದೆ. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ವಿಶೇಷ ನಿಗಾವಹಿಸಿ ಮುಂಬರುವ ಪರೀಕ್ಷೆಯಲ್ಲಿ ಶೇ.ನೂರರಷ್ಟು ಫಲಿತಾಂಶ ತರಲು ಪ್ರಯತ್ನಿಸುವಂತೆ ಅವರು ತಿಳಿಸಿದರು.

ಎಸ್. ಎಸ್. ಎಲ್. ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯ ಯೋಜನೆ, ನಿರಂತರ ಹಿಂದಿನ ಪ್ರಶ್ನೆ ಪತ್ರಿಕೆಗಳ ಪರಿಹಾರ ಕ್ರಮಗಳ ಜೊತೆಗೆ ಪುಸ್ತಕಗಳೊಂದಿಗೆ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಸಮಾಜದಲ್ಲಿ ತಮಗೆ ಗೌರವ ಸ್ಥಾನವಿದ್ದು, ಪಾಲಕರಿಗಿಂತ ಹೆಚ್ಚಿನ ಪ್ರಭಾವಶಾಲಿಗಳು, ಶಿಕ್ಷಕರು ಆಗಿರುವುದರಿಂದ ಎಲ್ಲ ಮಾಧ್ಯಮದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ವಿಶೇಷ ಗಮನ ನೀಡುವಂತೆ ಅವರು ಸಲಹೆ ನೀಡಿದರು.

ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗದಂತೆ ನಿಗಾ ವಹಿಸಿ. ಫಲಿತಾಂಶ ಸುಧಾರಣೆಗೆ ಅನುಕೂಲವಾಗುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮುಂದಿನ ಒಂದೂವರೆ ತಿಂಗಳ ಕಾಲ ಯೋಜನೆ ರೂಪಿಸಿ, ಮಕ್ಕಳನ್ನು ಲಿಖಿತ ರೂಪದಲ್ಲಿ ಮನೆಪಾಠ ಮಾಡುವ ಬಗ್ಗೆ ಪ್ರೋತ್ಸಾಹಿಸಬೇಕು. ವಿಷಯವಾರು ಪ್ರಶ್ನೆ ಪತ್ರಿಕೆ ಶಾಲಾವಾರು,ಸಿದ್ದವಾಗಿಟ್ಟುಕೊಂಡು, ಪ್ರಶ್ನೋತ್ತರ ಪರಿಹಾರಕ್ಕೆ ಉತ್ತೇಜನ ನೀಡಬೇಕು. ಅದರಂತೆ ಸಮಸ್ಯಾತ್ಮಕ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಅನುದಾನಿತ ಶಾಲೆಗಳ ಬಗ್ಗೆಯೂ ತೀವ್ರ ನಿಗಾ ಇಡಬೇಕು ಎಂದರು.

ವಸತಿನಿಲಯ ವಿದ್ಯಾರ್ಥಿಗಳ ಬಗ್ಗೆಯೂ ನಿಗಾ ವಹಿಸಬೇಕು, ಆಯಾ ವಸತಿನಿಲಯಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಅತೀ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಮನ್ವಯತೆ ಸಾಧಿಸಬೇಕು. ಒಟ್ಟಾರೆ ಮಕ್ಕಳ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ನೀಡಬೇಕೆಂದು ಡಿಸಿ ರಾಹುಲ್‌ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ 15000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು,ಈ ಪೈಕಿ ಹೆಚ್ಚಿನ ಮಕ್ಕಳು ಪ್ರತಿಶತ 95 ಅಂಕ ಪಡೆಯುವಂತೆ ಸಿದ್ಧಗೊಳಿಸಬೇಕು. ಜಿಲ್ಲೆಯ ಕನ್ನಡ , ಆಂಗ್ಲ, ಉರ್ದು ಹಾಗೂ ತೆಲಗು ಪ್ರತಿ ಶಾಲಾವಾರು ಫಲಿತಾಂಶ ಹೆಚ್ಚಿಸಬೇಕು. ಹೆಣ್ಣು ಮಕ್ಕಳ ಫಲಿತಾಂಶದಲ್ಲಿ ಶೇ. ನೂರರಷ್ಟು ಫಲಿತಾಂಶ ತರಬೇಕು. ಗಂಡು ಮಕ್ಕಳ ಫಲಿತಾಂಶದಲ್ಲಿಯೂ ಹೆಚ್ಚಳ ಆಗಬೇಕು. ರಾಜ್ಯಕ್ಕೂ ಮಕ್ಕಳು ರ್‍ಯಾಂಕ್ ಬರುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ರ್‍ಯಾಂಕ್ ಮೇಲಕ್ಕೆ ತರಲು ಹೆಚ್ಚಿನ ಗಮನ ನೀಡಬೇಕು ಎಂದರು.

ಇತ್ತೀಚೆಗೆ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂದೀಪ್ ಬಾಡದ ಹಾಗೂ ಡಾ. ನಿವೇದಿತಾ ಅವರು "ನನ್ನ ಕನಸು " ಕಾರ್ಯಕ್ರಮ ಅಂಗವಾಗಿ ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಡಿಡಿಪಿಐ ಚಿತ್ರಶೇಖರ್, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವಣಗೌಡ ಹಾಲದಾಳ ಸ್ವಾಗತಿಸಿದರು.