ಕನ್ನಡಪ್ರಭ ವಾರ್ತೆ ವಿಜಯಪುರ

ಚುನಾವಣೆ ಪೂರ್ವ ಉಚಿತ ಕೊಡುಗೆ ಪ್ರಕಟಿಸುವ ರಾಜಕೀಯ ಪಕ್ಷಗಳ ನಡೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಇದರಿಂದ ಬುದ್ಧಿ ಕಲಿತು ಗ್ಯಾರಂಟಿಯೇತರ ಅಭಿವೃದ್ಧಿಗಳ ಕಡೆಗೆ ಗಮನಹರಿಸಬೇಕೆಂದು ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಅಧಿಕಾರದ ಲಾಲಸೆಗಾಗಿ ಉಚಿತ ಕೊಡುಗೆಗಳನ್ನು ಘೋಷಿಸುತ್ತಿವೆ. ಇದರಿಂದಾಗಿ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರ ಉಚಿತ ಕೊಡುಗೆಗಳನ್ನೂ ನೀಡಲಾಗದೇ ಅಭಿವೃದ್ಧಿಗೂ ಆದ್ಯತೆ ಕಲ್ಪಿಸಲಾಗದೇ ಪರಿತಪಿಸುತ್ತಿವೆ. ಜನ ಉಚಿತ ಯೋಜನೆಗಳಿಂದಾಗಿ ಸಂತುಷ್ಠರಾಗಿಲ್ಲ. ಮಾತ್ರವಲ್ಲ, ಜನ ದುಡಿಯುವ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪರಾವಲಂಬಿಗಳಾಗುತ್ತಿದ್ದಾರೆ. ದುಡಿಯುವ ವರ್ಗಕ್ಕೂ ಈ ಯೋಜನೆ ನ್ಯಾಯ ಒದಗಿಸುತ್ತಿಲ್ಲ. ಹೀಗಾಗಿ ಆರ್ಥಿಕತೆ ಕುಂಠಿತಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಅತ್ತ ಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ಅನುಷ್ಟಾನಗೊಳಿಸಲಾಗದೆ ಇತ್ತ ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಲಾಗದೇ ತ್ರಿಶಂಕು ಸ್ಥಿತಿ ತಲುಪಿದೆ. ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಇಡೀ ರಾಜ್ಯವನ್ನು ದಿವಾಳಿ ಮಾಡಿಟ್ಟಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸಲಾಗದೇ ಪರಿತಪಿಸುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಬೀಸಿರುವ ಚಾಟಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಅನ್ವಯಿಸಲಿದ್ದು, ಕೂಡಲೇ ಬುದ್ಧಿ ಕಲಿತು ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.