ಮಕ್ಕಳಿಗೆ ಗುಣಮಟ್ಟದ ಆಹಾರ ಒದಗಿಸುವಲ್ಲಿ ಗಮನಹರಿಸಿ: ತಾಲೂಕು ಆಡಳಿತಾಧಿಕಾರಿ ಎಂ.ಬಾಬು

| Published : Oct 31 2025, 01:45 AM IST

ಮಕ್ಕಳಿಗೆ ಗುಣಮಟ್ಟದ ಆಹಾರ ಒದಗಿಸುವಲ್ಲಿ ಗಮನಹರಿಸಿ: ತಾಲೂಕು ಆಡಳಿತಾಧಿಕಾರಿ ಎಂ.ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಇಒ ಮತ್ತು ನಾನು ಸೇರಿ ತಾಲೂಕಿನ ಹತ್ತಾರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಮಕ್ಕಳಿಗೆ ರಕ್ಷಣೆ ಇಲ್ಲದಿರುವುದು ಕಂಡುಬಂದಿತು. ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ 10 ರಿಂದ 15 ಮಕ್ಕಳ ಸಂಖ್ಯೆ ಕಂಡುಬರುತ್ತದೆ. ಮಧ್ಯಾಹ್ನದ ವೇಳೆ ಕೇಂದ್ರಗಳಿಗೆ ಭೇಟಿ ನೀಡಿದಾಗ ಸೊಳ್ಳೆಗಳು, ನೊಣಗಳು ಮಕ್ಕಳ ಮೇಲೆ ಇರುವುದು ಕಂಡುಬಂದಿತು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿ ನಿಲಯಗಳಲ್ಲಿನ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡದಿರುವುದು ಕಂಡುಬಂದಿದೆ. ಇದಕ್ಕೆ ನೇರ ಹೊಣೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಆಗಿದ್ದಾರೆ. ಮುಂದೆ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ನಿಟ್ಟಿನಲ್ಲಿ ಗಮನ ವಹಿಸಬೇಕು. ಇಲ್ಲವಾದರೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಉಪ ಕಾರ್ಯದರ್ಶಿಯೂ ಆಗಿರುವ ತಾಪಂ ಆಡಳಿತಾಧಿಕಾರಿ ಎಂ.ಬಾಬು ಅವರು ಎಚ್ಚರಿಸಿದರು.

ಬುಧವಾರ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚೆಗೆ ಜಿಪಂ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ನಿಗದಿತ ಪೋಷಕಾಂಶಗಳ ಆಹಾರ ಪದಾರ್ಥಗಳನ್ನು ವಿತರಣೆ ಮಾಡದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ನಾನು ಕೂಡ ಕೆಲವು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ, ಪರಿಶೀಲಿಸಿದ್ದೇನೆ. ಆಹಾರ ತಯಾರಿಸುವಾಗ ಸಮರ್ಪಕ ತರಕಾರಿ ಬಳಕೆಯಾಗುತ್ತಿಲ್ಲ, ಇನ್ನೂ ಬೆಳಗ್ಗಿನ ತಿಂಡಿಯ ಕಥೆ ಹೇಳತೀರದಾಗಿದೆ. ನಮ್ಮ ಸರ್ಕಾರಿ ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳಲ್ಲಿ ಗ್ರಾಮೀಣ ಭಾಗದ ಬಡಮಕ್ಕಳೇ ವಾಸಿಸುತ್ತಿದ್ದಾರೆ. ಇವರಿಗೆ ಪೋಷಕಾಂಶಗಳುಳ್ಳ ಆಹಾರ ಪದಾರ್ಥ ಕೊಡದಿದ್ದರೆ ಆರೋಗ್ಯವಂತರಾಗಿ ಶಿಕ್ಷಣ ಪಡೆಯಲು ಹೇಗೆ ಸಾಧ್ಯ. ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಪೋಷಕಾಂಶಯುಕ್ತ ಆಹಾರ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಸರ್ಕಾರಿ ನಿಯಮಾನುಸಾರ ವಿದ್ಯಾರ್ಥಿ ನಿಲಯಗಳಿಗೆ ತರಕಾರಿ ವಿತರಣೆ ಮಾಡದ ಏಜೆನ್ಸಿಯವರನ್ನು ಕೂಡಲೇ ಬದಲಾಯಿಸಿ, ಅಲ್ಲದೆ ನಿಗದಿತ ತರಕಾರಿ ನೀಡಿರುವ ಕುರಿತು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಂದ ಲಿಖಿತ ಮಾಹಿತಿ ಪಡೆದುಕೊಳ್ಳಬೇಕು. ಪ್ರಮುಖವಾಗಿ ಅಡುಗೆ ಸಿಬ್ಬಂದಿ ಗುಣಮಟ್ಟದಿಂದ ಆಹಾರ ತಯಾರಿ ಮಾಡುವ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿದ್ಯಾರ್ಥಿ ವೇತನ ನೀಡಿಲ್ಲ: ತಾಲೂಕಿನಲ್ಲಿ ಕಳೆದ ಸಾಲಿನ ಮತ್ತು ಈ ಸಾಲಿನಲ್ಲಿ ವಿದ್ಯಾರ್ಥಿ ವೇತನ ನೀಡಿಲ್ಲದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಸರ್ಕಾರದ ಮಟ್ಟದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗುತ್ತಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ವಿಳಂಬ ಯಾಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಆಯಾ ಸಾಲಿನ ವಿದ್ಯಾರ್ಥಿ ವೇತನ ಹಾಗೂ ಇತರೆ ಪ್ರತಿಭಾ ಪುರಸ್ಕಾರದ ಗೌರವಧನ ನಿಗದಿತ ಅವಧಿಯಲ್ಲಿ ಬಿಡುಗಡೆ ಮಾಡುವ ಕುರಿತು ಗಮನಹರಿಸಬೇಕೆಂದು ತಿಳಿಸಿದರು.

ಸಮೀಕ್ಷೆ ಶೇ.89.31:

ರಾಜ್ಯ ಸರ್ಕಾರ ಆರಂಭಿಸಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಕಾರ್ಯ ತಾಲೂಕಿನಲ್ಲಿ ಶೇ.89.31ರಷ್ಟು ನಡೆದಿರುವುದು ತೃಪ್ತಿದಾಯಕವಾಗಿಲ್ಲ. ಹಾಸನ ಸೇರಿದಂತೆ ಇತರೆ ತಾಲೂಕುಗಳು ಶೇ.90ರಿಂದ ಶೇ.94ರಷ್ಟು ಸಾಧನೆ ಮಾಡಿವೆ. ನಿಗದಿತ ಅವಧಿಯೊಳಗೆ ನಮ್ಮ ಅರಕಲಗೂಡು ತಾಲೂಕೂ ಶೇ.100ರಷ್ಟು ಗುರಿ ಮುಟ್ಟಬೇಕೆಂದು ಬಿಸಿಎಂ ಅಧಿಕಾರಿಗೆ ಸೂಚನೆ ನೀಡಿದರು. ಸಮೀಕ್ಷೆ ಕಾರ್ಯದಿಂದ ಎಲ್ಲಾ ಶಿಕ್ಷಕರು ಬಿಡುಗಡೆಗೊಂಡಿದ್ದಾರೆ. ಇದರಿಂದ ಕಾರ್ಯಕ್ಕೆ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಗಿದೆ. ಗ್ರಾಪಂ ಮಟ್ಟದ ಅಧಿಕಾರಿಗಳಿಂದ ಸಮೀಕ್ಷೆ ಮುಂದುವರಿದಿದೆ. ತಾಲೂಕಿನಲ್ಲಿ ಒಟ್ಟು 55.904 ಮನೆಗಳಿದ್ದು, ಒಟ್ಟು 2.13.751 ಜನಸಂಖ್ಯೆ ಇದೆ. ಈ ಪೈಕಿ ಇದುವರೆಗೂ 54,648 ಮನೆಗಳಿಂದ 1,90,903 ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ. ನಿಗದಿತ ಅವಧಿಯೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಬಿಸಿಎಂ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಎಕೋ ತಪಾಸಣೆಗೆ ಒತ್ತುನೀಡಿ:

ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಆರೋಗ್ಯ ಇಲಾಖೆ ವತಿಯಿಂದ ಹೆಚ್ಚಿನದಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಬೇಕಿದೆ. ಪ್ರಮುಖವಾಗಿ ಹೃದಯ ತಪಾಸಣಾ ಶಿಬಿರ ಆಯೋಜನೆ ಮಾಡುವ ವೇಳೆ ಇಸಿಜಿಯೊಂದಿಗೆ ಎಕೋ ತಪಾಸಣೆಗೆ ಹೆಚ್ಚು ಒತ್ತುನೀಡಿ. ಇದರಿಂದ ಹೃದಯ ತೊಂದರೆ ಕಂಡುಬಂದರೆ ತ್ವರಿತವಾಗಿ ಚಿಕಿತ್ಸೆ ಕೊಡಲು ಅನುಕೂಲವಾಗುತ್ತದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮತ್ತು ಸಾರ್ವಜನಿಕ ಆಸ್ಪತ್ರೆ ಆಡಳತಾಧಿಕಾರಿ ಡಾ.ಸ್ವಾಮೀಗೌಡ ಅವರಿಗೆ ಸೂಚನೆ ನೀಡಿದರು.

ಅಂಗನವಾಡಿ ಮಕ್ಕಳಿಗೆ ರಕ್ಷಣೆ ಬೇಕು:

ಇತ್ತೀಚೆಗೆ ಇಒ ಮತ್ತು ನಾನು ಸೇರಿ ತಾಲೂಕಿನ ಹತ್ತಾರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಮಕ್ಕಳಿಗೆ ರಕ್ಷಣೆ ಇಲ್ಲದಿರುವುದು ಕಂಡುಬಂದಿತು. ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ 10 ರಿಂದ 15 ಮಕ್ಕಳ ಸಂಖ್ಯೆ ಕಂಡುಬರುತ್ತದೆ. ಮಧ್ಯಾಹ್ನದ ವೇಳೆ ಕೇಂದ್ರಗಳಿಗೆ ಭೇಟಿ ನೀಡಿದಾಗ ಸೊಳ್ಳೆಗಳು, ನೊಣಗಳು ಮಕ್ಕಳ ಮೇಲೆ ಇರುವುದು ಕಂಡುಬಂದಿತು. ಸೊಳ್ಳೆಪರದೆ ಸೇರಿ ಇತರೆ ಮುನ್ನಚ್ಚರಿಕೆ ಕ್ರಮಗಳನ್ನು ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೈಗೊಂಡಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ವಿವೇಚನರಹಿತವಾಗಿ ಮಾತನಾಡುತ್ತಾರೆ ಎಂದು ಸಿಡಿಪಿಒ ವೆಂಕಟೇಶ್ ಅವರನ್ನು ಎಚ್ಚರಿಸಿದರು. ಕೂಡಲೇ ಆಯಾ ಗ್ರಾಪಂ ವತಿಯಿಂದ ಸೊಳ್ಳೆಪರದೆ ಇತರೆ ಅಗತ್ಯತೆಗಳನ್ನು ಕೊಡಿಸುವ ಕೆಲಸವನ್ನು ನಿರ್ವಹಿಸುವಂತೆ ಇಒಗೆ ಸೂಚಿಸಿದರು.

ರೈತರಿಂದ ಬೆಳೆ ವಿಮೆ ಮಾಡಿಸಿ:

ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಅರಕಲಗೂಡು ತಾಲೂಕಿನಲ್ಲಿ ಬೆಳೆ ವಿಮೆ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ರೈತರ ಬೆಳೆಗಳು ಹಾನಿಗೊಳಗಾಗಿವೆ. ಈ ಹಂತದಲ್ಲಿ ವಿಮೆ ಮಾಡಿಸಿದ್ದರೆ ಸೂಕ್ತಪರಿಹಾರ ದೊರೆಯುತ್ತಿತ್ತು. ಮುಂಗಾರು, ಹಿಂಗಾರು ಬೆಳೆಗಳಿಗೆ ನಿಗದಿಯಾಗಿರುವ ಬೆಳೆ ವಿಮೆ ಮಾಡಿಸಲು ಕೃಷಿ ಇಲಾಖೆ ಹೆಚ್ಚಿನ ಗಮನವಹಿಸಬೇಕಿದೆ. ಈ ನಿಟ್ಟಿನಲ್ಲಿ ಇಂದಿನಿಂದಲೇ ಗಮನಹರಿಸಿ ಎಂದು ಎಂ.ಬಾಬು ಕೃಷಿ ಅಧಿಕಾರಿಗೆ ಸಲಹೆ ನೀಡಿದರು.ತಾಲೂಕಿನಲ್ಲಿ 47 ಸಾವಿರ ಹೆಕ್ಟೇರ್‌ ಕೃಷಿ ಪ್ರದೇಶವಿದ್ದು, 41 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯನ್ನು ಕೈಗೊಳ್ಳಲಾಗಿದೆ. ಕಳೆದ ವರ್ಷ ಬೆಳೆ ವಿಮೆ ಮಾಡಿಸಿದ ರೈತರಿಗೆ ನೇರವಾಗಿ ಬೆಳೆ ವಿಮೆ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಈ ಸಾಲಿನಲ್ಲಿ 216 ಮಂದಿ ಬೆಳೆ ವಿಮೆ ಮಾಡಿಸಿದ್ದಾರೆ. ಕಳೆದ ವಾರ ಬಿದ್ದ ಮಳೆಯಿಂದ 10 ಹೆಕ್ಟೇರ್‌ ನಲ್ಲಿ ನೀರಾವರಿ ಪ್ರದೇಶದಲ್ಲಿನ ಭತ್ತ ಹಾನಿಯಾಗಿದೆ. ಈ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ಕೃಷಿ ಅಧಿಕಾರಿ ಕವಿತಾ ಮಾಹಿತಿ ನೀಡಿದರು.

ಸಭೆಯಲ್ಲಿ ತೋಟಗಾರಿಕೆ, ಪಶು, ಕಾರ್ಮಿಕ, ಅರಣ್ಯ , ರೇಷ್ಮೆ, ಸಿಡಿಪಿಒ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಇಲಾಖೆಗಳ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ತಾಪಂ ಇಒ ಶ್ರೀನಿವಾಸ್,ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.