ಸಾರಾಂಶ
ಪುರುಷ ಮಹಿಳೆ ಎಂಬ ಬೇಧವಿಲ್ಲದೆ ಎಲ್ಲರೂ ಸಮಾನರು ಎಂಬ ಸಂವೇದನಾಶೀಲತೆ ಮೂಲಕ ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸುವತ್ತ ಚಿತ್ತ ಹರಿಸಬೇಕಿದೆ
ಶಿವಮೊಗ್ಗ: ಪುರುಷ ಮಹಿಳೆ ಎಂಬ ಬೇಧವಿಲ್ಲದೆ ಎಲ್ಲರೂ ಸಮಾನರು ಎಂಬ ಸಂವೇದನಾಶೀಲತೆ ಮೂಲಕ ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸುವತ್ತ ಚಿತ್ತ ಹರಿಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅಭಿಪ್ರಾಯಪಟ್ಟರು.
ನಗರದ ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಹಾಗೂ ಕಾನೂನು ಸ್ನಾತಕೋತ್ತರ ಅಧ್ಯಯನ ಕೇಂದ್ರದವತಿಯಿಂದ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಯಾರು ಮೇಲಲ್ಲ ಕೀಳಲ್ಲ. ಎಲ್ಲರೂ ಸಮಾನರು ಎಂಬ ಸಂವೇದನಾಶೀಲತೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕಿದೆ. ಪುರುಷರು ಸಹ ಇತರರ ಮೇಲೆ ಅವಲಂಬಿತರಾಗದೆ ಅಡುಗೆ, ಮನೆಗೆಲಸದಂತಹ ವಿಚಾರಗಳಲ್ಲಿಯು ಸ್ವಾವಲಂಬನೆ ಪಡೆಯಿರಿ ಎಂದು ಸಲಹೆ ನೀಡಿದರು.ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅನೇಕ ಹೋರಾಟಗಳನ್ನು ನಡೆಸುತ್ತಿದ್ದಾಳೆ. ಸೀಮಿತತೆ ಕಾಲದಿಂದ ದೇಶದ ಅತ್ಯುನ್ನತ ಸ್ಥಾನವನ್ನು ಪಡೆಯುವ ಮಟ್ಟಿಗೆ ಹೆಣ್ಣು ಬದಲಾಗಿದ್ದಾರೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಸದಸ್ಯೆ ರುಕ್ಮಿಣಿ ವೇದವ್ಯಾಸ ಮಾತನಾಡಿ, ಮಹಿಳೆ ಯಾವುದೇ ಕ್ಷೇತ್ರದಲ್ಲಾಗಲ್ಲಿ ಒಲುಮೆಯಿಂದ ಸಾಧಿಸಲು ಪ್ರಯತ್ನಿಸುತ್ತಾರೆ. ಮಹಿಳಾ ದಿನ ಅಂತಹ ಸಾಧಕರನ್ನು ನೆನಪು ಮಾಡಿಕೊಳ್ಳುವ ಪ್ರೇರಣೀಯ ಕ್ಷಣವಾಗಿದೆ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಅದ್ಭುತ ವೇದಿಕೆಗಳನ್ನು ನೀಡುತ್ತಿದ್ದರು ಸಹ, ಇಂದಿಗೂ ಅಭದ್ರತೆಯ ವಾತಾವರಣವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ಅನಲ್ ಇದ್ದರು.