ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತ್ಲ್ ಕ್ಷೇತ್ರದ ಆನುವಂಶಿಕ ಮೊಕ್ತೇಸರ, ಹಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ (೭೭) ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಕಳೆದ ೫೫ ವರ್ಷಗಳಿಂದ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ತಮ್ಮ ೧೫ನೇ ವರ್ಷ ವಯಸ್ಸಿನಲ್ಲಿಯೇ ನಾಟಿ ಔಷಧ ವಿದ್ಯೆ ಕಲಿತುಕೊಂಡಿದ್ದ ಲೀಲಾವತಿ ಪೂಜಾರಿ ೫೫ ವರ್ಷಗಳಲ್ಲಿ ಸಾವಿರಾರು ಮಂದಿಯ ರೋಗಗಳನ್ನು ಗಿಡಮೂಲಿಕೆ ಔಷಧಿಯ ಮೂಲಕ ಗುಣಪಡಿಸಿದ್ದಾರೆ. ಸರ್ಪಸುತ್ತು, ಕೆಂಪು, ಬೆಸುರ್ಪು, ದೃಷ್ಟಿ, ಸೋರಿಯಾಸಿಸ್ ಚರ್ಮರೋಗ, ಮಕ್ಕಳ ಚಿಕಿತ್ಸೆ, ಸಂಧಿವಾತ ಇತ್ಯಾದಿ ಸಮಸ್ಯೆಗಳನ್ನು ನಾಟಿ ಔಷಧದ ಮೂಲಕ ಗುಣಪಡಿಸುತ್ತಿದ್ದರು. ಪಾರಂಪರಿಕ ಮಂತ್ರ ವಿದ್ಯೆ ಹೊಂದಿರುವ ಲೀಲಾವತಿ ಅವರು ದೃಷ್ಟಿದೋಷ ನಿವಾರಣೆಗೆ ನೂಲು ಕಟ್ಟುವುದರಲ್ಲಿ ಮತ್ತು ಬೆಂಕಿ ಅವಘಡದಿಂದಾಗುವ ಉರಿ ತೆಗೆಯುವುದರಲ್ಲಿ ಎತ್ತಿದ ಕೈಯಾಗಿದ್ದರು. ಗೆಜ್ಜೆಗಿರಿ ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಇಲ್ಲಿ ಕಾರಣಿಕ ಮಾತೆ ದೇಯಿ ಬೈದ್ಯೆತಿಯ ಸ್ಮರಣೆಯಲ್ಲಿ ಅವರು ಔಷಧ ನೀಡುತ್ತಿದ್ದಾರೆ. ತಮ್ಮ ಪುತ್ರ, ಗೆಜ್ಜೆಗಿರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ ಜತೆ ಸೇರಿಕೊಂಡು ಕೇಶ ತೈಲ, ನೋವಿನ ಎಣ್ಣೆಯನ್ನೂ ತಯಾರಿಸುತ್ತಿದ್ದಾರೆ.
೫೦೦ ವರ್ಷಗಳ ಹಿಂದೆ ಬದುಕಿದ ಕೋಟಿ ಚೆನ್ನಯರ ತಾಯಿಯಾದ ದೇಯಿ ಬೈದ್ಯೆತಿ ನಾಟಿ ವೈದ್ಯೆಯಾಗಿದ್ದರು. ೬೫ ವರ್ಷಗಳ ಹಿಂದೆ ಇದೇ ಗೆಜ್ಜೆಗಿರಿಯಲ್ಲಿನ ಕುಟುಂಬಕ್ಕೆ ಸೊಸೆಯಾಗಿ ಬಂದ ಲೀಲಾವತಿ ಪೂಜಾರಿ, ತಮ್ಮ ಗಂಡ ದಿ.ದೂಮಣ್ಣ ಪೂಜಾರಿ ಮತ್ತು ಅತ್ತೆ ದಿ.ಮದನು ಪೂಜಾರಿ ಅವರಿಂದ ನಾಟಿ ವೈದ್ಯಕೀಯದ ವಿದ್ಯೆ ಕಲಿತುಕೊಂಡು ಈ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ.ಗೆಜ್ಜೆಗಿರಿಯಲ್ಲಿ ತನ್ನ ಪುತ್ರ ಶ್ರೀಧರ ಪೂಜಾರಿ ಅವರೊಂದಿಗೆ ವಾಸ್ತವ್ಯವಿರುವ ಲೀಲಾವತಿ ಪೂಜಾರಿ ಅವರು ಪುತ್ರರಾದ ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ ಹಾಗೂ ಪುತ್ರಿ ಸವಿತಾ ಮಹಾಬಲ ಪೂಜಾರಿ ಅವರನ್ನು ಹೊಂದಿದ್ದಾರೆ.