ಪ್ರಶಸ್ತಿ, ಗೌರವಗಳಿಗಾಗಿ ಕೆಲವರು ರಾಜಕಾರಣಿಗಳು, ಸಂಘ-ಸಂಘಟನೆಗಳ ಬೆನ್ನುಬೀಳುತ್ತಾರೆ. ಇನ್ನೂ ಕೆಲವರು ಪ್ರಶಸ್ತಿ-ಸನ್ಮಾನಗಳು ಶ್ರಮ-ಪ್ರತಿಭೆಗೆ ತಕ್ಕಂತೆ ತಾವಾಗೇ ಅರಸಿ ಬರಬೇಕು ಎಂದು ನಿರಂತರ ಕಾಯಕದಲ್ಲಿ ತೊಡಗಿರುತ್ತಾರೆ. ಇಂತಹ ಕಾಯಕಯೋಗಿಗಳ ಸಾಲಿನಲ್ಲಿ ತಾಲೂಕಿನ ನರಸಗೊಂಡನಹಳ್ಳಿಯ ಕೀಲು ಕುದುರೆ ಕಲಾವಿದ ಬಸವರಾಜು ಕೂಡ ಒಬ್ಬರು. ಇವರ ಕಲಾರಾಧನೆ ಪರಿಗಣಿಸಿ 2026-2027ನೇ ಸಾಲಿನ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ನೀಡುವ ಪ್ರಶಸ್ತಿ ದೊರೆತಿದೆ.
- 30 ವರ್ಷಗಳ ಸತತ ಕಲಾಸೇವೆಗೆ ಸಂದ ಗೌರವ । ತಾತ, ತಂದೆಯಿಂದ ಕಲಿತ ವಿದ್ಯೆ ನಿರಂತರ ಪ್ರದರ್ಶನ
- - -ರಾಜು ಜಿ.ಎಚ್. ಹೊನ್ನಾಳಿ
ಕನ್ನಡಪ್ರಭ ವಾರ್ತೆ ಹೊನ್ನಾಳಿಪ್ರಶಸ್ತಿ, ಗೌರವಗಳಿಗಾಗಿ ಕೆಲವರು ರಾಜಕಾರಣಿಗಳು, ಸಂಘ-ಸಂಘಟನೆಗಳ ಬೆನ್ನುಬೀಳುತ್ತಾರೆ. ಇನ್ನೂ ಕೆಲವರು ಪ್ರಶಸ್ತಿ-ಸನ್ಮಾನಗಳು ಶ್ರಮ-ಪ್ರತಿಭೆಗೆ ತಕ್ಕಂತೆ ತಾವಾಗೇ ಅರಸಿ ಬರಬೇಕು ಎಂದು ನಿರಂತರ ಕಾಯಕದಲ್ಲಿ ತೊಡಗಿರುತ್ತಾರೆ. ಇಂತಹ ಕಾಯಕಯೋಗಿಗಳ ಸಾಲಿನಲ್ಲಿ ತಾಲೂಕಿನ ನರಸಗೊಂಡನಹಳ್ಳಿಯ ಕೀಲು ಕುದುರೆ ಕಲಾವಿದ ಬಸವರಾಜು ಕೂಡ ಒಬ್ಬರು. ಇವರ ಕಲಾರಾಧನೆ ಪರಿಗಣಿಸಿ 2026-2027ನೇ ಸಾಲಿನ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ನೀಡುವ ಪ್ರಶಸ್ತಿ ದೊರೆತಿದೆ.
55 ವರ್ಷದ ಬಸವರಾಜು ಅವರು ತಮ್ಮ ತಾತ ಮಲ್ಲಪ್ಪ ಹಾಗೂ ತಂದೆ ಬಸಪ್ಪ ಅವರಿಂದ ವಂಶ ಪಾರಂಪರ್ಯವಾಗಿ ಬಂದ ಕೀಲು ಕುದುರೆ ಕಲೆಯನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. 25ನೇ ವಯಸ್ಸಿನಲ್ಲೇ ರಂಗಭೂಮಿ ಕಲಾವಿದರಾಗಿದ್ದ ತಾತಾ ಮಲ್ಲಪ್ಪ ಹಾಗೂ ತಂದೆ ಎಚ್.ಬಸಪ್ಪ ಅವರಿಂದ ಬಳುವಳಿಯಂತೆ ಬಂದಿರುವ ಕೀಲುಕುದುರೆ ಕಲೆಯನ್ನು ಕಲಿತು ರಾಜ್ಯದೆಲ್ಲೆಡೆ ಕೀಲು ಕುದುರೆ ಕಾರ್ಯಕ್ರಮ ನೀಡಿದ್ದಾರೆ. ಪರಿಣಾಮ ಕೀಲು ಕುದುರೆ ಬಸವರಾಜು ಎಂದೇ ಚಿರಪರಿಚಿತರಾಗಿದ್ದಾರೆ.ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ ಬಸವರಾಜು ಕೀಲು ಕುದುರೆ ಕಲೆ ಜೊತೆಯಲ್ಲೇ ಪುರುವಂತಿಕೆ ಕಲೆಯಲ್ಲೂ ಪ್ರಖ್ಯಾತಿ ಪಡೆದಿದ್ದಾರೆ. ಕಿತ್ತೂರು ಉತ್ಸವ ಹಾಗೂ 2016ರಲ್ಲಿ ಮೈಸೂರು ದಸರಾ ಉತ್ಸವ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನ ಹಾಗೂ ವಿವಿಧ ಸಾರ್ವಜನಿಕ ಜಾತ್ರೆ ಹಾಗೂ ಹಬ್ಬ ಹರಿದಿನಗಳಲ್ಲಿ ಕೀಲು ಕುದುರೆ ಕಲೆಯನ್ನು ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ. ಆಂಧ್ರಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರಗಳಲ್ಲೂ ಕರ್ನಾಟಕದ ಕೀಲುಕುದುರೆ ಕಲೆ ಪರಿಚಯಿಸಿ, ಪ್ರದರ್ಶಿಸಿದ ಹೆಗ್ಗಳಿಗೆ ಇವರದು.
ಕಾಲಿಗೆ 3 ಅಡಿಯ ಮರಗಾಲುಗಳನ್ನು ಬಿಗಿದುಕೊಂಡು, ಕುದುರೆ ಆಕಾರದ ಬುಟ್ಟಿ ಕಟ್ಟಿಕೊಂಡು ಬಣ್ಣಬಣ್ಣದ ಜೂಲಾ (ವಸ್ತ್ರ)ಗಳನ್ನು ಧರಿಸಿ, ಮುಖಕ್ಕೆ ಬಣ್ಣ ಲೇಪಿಸಿಕೊಂಡು ರಾಜರಾಣಿಯರ ವೇಷದಲ್ಲಿ ಕಂಗೊಳಿಸುವ ಕೀಲು ಕುದುರೆ ಕಲಾವಿದ ಬಸವರಾಜ ಅವರು, ವಾದ್ಯಗಾರರು ನುಡಿಸುವ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ. ಇವರ ಜಾನಪದ ಕಲೆಯನ್ನು ನೋಡಿರುವ ಸಾಕಷ್ಟು ಅಭಿಮಾನಿಗಳು ಮನಸಾರೆ ಪ್ರಶಂಸಿಸಿದ್ದಾರೆ.ಇಡೀ ಕುಟುಂಬ ಕಲಾವಿದರ ಕುಟುಂಬ:
ತಾತಾ ಮಲ್ಲಪ್ಪ ರಂಗ ಕಲಾವಿದರಾಗಿದ್ದರು. ತಂದೆ ಬಸಪ್ಪ ರಂಗಕಲೆ, ಪುರವಂತಿಕೆಯಲ್ಲಿ ಖ್ಯಾತಿ ಪಡೆದಿದ್ದರು. ತಮ್ಮ ಕುಟುಂಬದ ಈ ಕಲಾಸೇವೆಯು ಬಸವರಾಜು ಹಾಗೂ ಅವರ ಸಹೋದರರಾದ ಈಶ್ವರಪ್ಪ, ಚನ್ನಬಸಪ್ಪ, ಗುರುಶಾಂತಪ್ಪ ಹಾಗೂ ಮಹೇಶ್ವರಪ್ಪ ಅವರಿಗೂ ಕರಗತವಾಗಿವೆ. ತನ್ನಂತಹ ನೂರಾರು ಕಲಾ ಸೇವಕರು ಅನೇಕ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಕಲಾ ಸೇವೆ ಮಾಡುತ್ತಿದ್ದಾರೆ. ಇಂತಹ ಪ್ರಶಸ್ತಿಗಳು ಅವರಿಗೂ ಲಭಿಸಲಿ ಎನ್ನುತ್ತಾರೆ ಪ್ರಶಸ್ತಿ ಪುರಸ್ಕೃತ ಕಲಾವಿದ ಬಸವರಾಜು.ಪ್ರಶಸ್ತಿಗಳ ಸರಮಾಲೆ:
ಬಸವ ಜ್ಯೋತಿ ಪ್ರಶಸ್ತಿ, ಕರ್ನಾಟಕ ಸೇವಾ ಪ್ರಶಸ್ತಿ, ಗ್ರಾಮೀಣ ಸಿರಿ ಜಿಲ್ಲಾ ಪ್ರಶಸ್ತಿ, ರಾಜ್ಯಮಟ್ಟದ ಯುವಜನೋತ್ಸವ ಪ್ರಶಸ್ತಿ, ಜಾನಪದ ಕಲಾಸಿರಿ, ಜಾನಪದ ಜಾತ್ರೆ ದಾವಣಗೆರೆ ಪ್ರಶಸ್ತಿ ಇನ್ನೂ ಅನೇಕ ಜಾನಪದ ಸಂಭ್ರಮ ಪ್ರಶಸ್ತಿಗಳಿಗೆ ಕೀಲುಕುದುರೆ ಕಲಾವಿದ ಬಸವರಾಜು ಭಾಜನರಾಗಿದ್ದಾರೆ. ಪ್ರಸ್ತುತ ಸಂದಿರುವ ಜಾನಪದ ಅಕಾಡೆಮಿ ಪ್ರಶಸ್ತಿಯು ₹25000 ನಗದು, ಸ್ಮರಣಿಕೆ, ಶಾಲು, ಹಾರ ಒಳಗೊಂಡಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಪ್ರದಾನ ಮಾಡಲಾಗುವುದು.- - -
(ಕೋಟ್)ಸುಮಾರು 30 ವರ್ಷಗಳ ಸತತ ಕಲಾ ಸೇವೆಯನ್ನು ಮಾಡಿಕೊಂಡು ಬಂದಿರುವ ಪರಿಣಾಮ ಇಂದು ತನಗೆ ರಾಜ್ಯಮಟ್ಟದ ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಇಡೀ ನಮ್ಮ ಕುಟುಂಬಕ್ಕೆ ಸಲ್ಲುತ್ತದೆ ಎಂದು ಕನ್ನಡಪ್ರಭ ಎದುರು ನರಸಗೊಂಡನಹಳ್ಳಿಯ ಕೀಲುಕುದುರೆ ಕಲಾವಿದ ಬಸವರಾಜು ಅಭಿಮಾನದಿಂದ ಹೇಳಿದ್ದಾರೆ.
- - --27ಎಚ್.ಎಲ್.ಐ1: ಕೀಲು ಕುದುರೆ ವೇಷದಲ್ಲಿ ನರಸಗೊಂಡನಹಳ್ಳಿಯ ಕಲಾವಿದ ಬಸವರಾಜು.
-27ಎಚ್.ಎಲ್.ಐ1ಎ: ಬಸವರಾಜು.