ಸಾರಾಂಶ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ನಮ್ಮ ಪರಂಪರಾನುಗತವಾದ ಮೌಲಿಕ ಜಾನಪದ ಕಲೆಗಳು ನಮ್ಮ ಕಣ್ಣಮುಂದೆಯೇ ನಶಿಸಿ ಹೋಗುತ್ತಿದ್ದರೂ ಅವುಗಳನ್ನು ಉಳಿಸಿಕೊಳ್ಳಲಾಗದ ದೌರ್ಭಾಗ್ಯ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ವಿಷಾದ ವ್ಯಕ್ತಪಡಿಸಿದರು.ಜಾಲಹಳ್ಳಿ ಸೈಂಟ್ ಕ್ಲಾರಟ್ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ತು ಸಹಯೋಗದೊಂದಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಹಾಗೂ ರಾಜ್ಯ ಯುವ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನಪದರು ಮಾತಿನ ರೀತಿ, ನೀತಿ, ಶೈಲಿ ಕಲಿಸಿ ಕೊಟ್ಟವರು ಅಂತಹ ಜನಪದ ಕೋಲಾಟ ಬಯಲಾಟ ಗೀಗೀ ಪದಗಳು, ಲಾವಣಿ, ಒಗಟು ಮರೆಯಾಗುತ್ತಿವೆ. ಸೋಬಾನೆ ಪದಗಳಂತೂ ವಸ್ತುಪ್ರದರ್ಶನದಲ್ಲಿ ನೋಡುವ ಕಾಲ ಬಂದಿದೆ ಎಂದರು. ಇಂದಿನ ಯುವಕರು ಪಾಪ್ ಸಾಂಗ್, ಡಿಸ್ಕೋ ಸಂಗೀತಕ್ಕೆ ಮೊರೆಹೋಗುತ್ತಿದ್ದಾರೆ ಅಂತಹ ಯುವಕರನ್ನು ಮತ್ತೆ ಜನಪದಕ್ಕೆ ಕರೆತಂದು ಜಾನಪದ ಕಲೆಗಳನ್ನು ಉಳಿಸುವಲ್ಲಿ ಬಾಲಾಜಿ ಅವರ ಪರಿಶ್ರಮ ಶ್ಲಾಘನೀಯ ಎಂದರು.ಆಧುನೀಕರಣ, ಜಾಗತೀಕರಣದ ಹಾವಳಿಯಲ್ಲಿ ನಮ್ಮ ಮೂಲ ಸಂಸ್ಕೃತಿಯೇ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ನಾವಿಂದು ಜಾನಪದ ಬೇರುಗಳನ್ನು ಚೆನ್ನಾಗಿ ಅಧ್ಯಯನ ಮಾಡಿ, ಇಂದಿನ ಜನಾಂಗಕ್ಕೆ ಪರಿಚಯಿಸಬೇಕಿದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.ಸಮಾರಂಭದಲ್ಲಿ ಜಾನಪದ ನೃತ್ಯ, ಗಾಯನ, ಜನಪದ ತಂಡಗಳ ವಾದ್ಯ ಜರುಗಿತು. 20 ಜನರಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಹಾಗೂ ರಾಜ್ಯ ಯುವ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಹಾಗೂ ಟಿ.ಕೆ. ಗೌಡ ದತ್ತಿ ನಿಧಿ ನೀಡಲಾಯಿತು. ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷಾ, ರಾಜ್ಯಾಧ್ಯಕ್ಷ ಬಾಲಾಜಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವ ಶಹಜಹಾನ್ ಎಚ್ ಮುದಕವಿ, ಪ್ರಾಂಶುಪಾಲ ಮಾದೇಶ್ ಸಮಾಜ ಸೇವಕಿ ಸೌಭಾಗ್ಯ ಇದ್ದರು.