ನಮ್ಮ ಮೂಲ ಕಲೆಗಳನ್ನು ಉತ್ತೇಜಿಸುವ ಕೆಲಸ ಆಗಬೇಕು.

ಗದಗ: ನಮ್ಮ ಮೂಲ ಜನಪದ ಸಂಸ್ಕೃತಿಯ ವೈಭವ ಮಾಯವಾಗುತ್ತಿದೆ ಎನ್ನುವ ಭಯ ನಮ್ಮನ್ನು ಕಾಡುತ್ತಿದೆ. ಮುಂದಿನ ಪೀಳಿಗೆಗೆ ಜನಪದ ಕಲೆಗಳನ್ನು ಪರಿಚಯಿಸಿ ಉಳಿಸಿ ಬೆಳೆಸುವ ಕೆಲಸ ಹಿರಿಯ ಕಲಾವಿದರಿಂದ ಆಗಬೇಕಾಗಿದೆ. ಅದಕ್ಕೆ ಸಹಕಾರ ಕೂಡಾ ದೊರೆಯಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಎಎಸ್ಎಸ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಹಾಗೂ ಎಎಸ್ಎಸ್ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಪಂಚಂ.. ಪಗಡಂ. ಜಾನಪದ ಆಟ ನೃತ್ಯ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ವಿಶಿಷ್ಟ ಜಾನಪದ ಕಲೆಗಳನ್ನು ಹೊಂದಿರುವ ನಾವು ಅವುಗಳನ್ನು ಮರೆತಿದ್ದೇವೆ. ಸ್ವಾತಂತ್ರ್ಯ ನಂತರದ ಪಿಳಿಗೆ ನಮ್ಮ ಮೂಲ ಕಲೆಗಳತ್ತ ಹೆಚ್ಚಿನ ಒಲವು ಹೊಂದಬೇಕಾಗಿತ್ತು. ಹಲವರು ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡಿದರು. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ನಮ್ಮ ಉತ್ತರ ಕರ್ನಾಟಕದ ಜನಪದ ಸಂಸ್ಕೃತಿ, ಸಾಹಿತ್ಯ ಪ್ರಗತಿ ಕಾಣಲಿಲ್ಲ. ಈಗಲೂ ನಮ್ಮ ಮೂಲ ಕಲೆಗಳನ್ನು ಉತ್ತೇಜಿಸುವ ಕೆಲಸ ಆಗಬೇಕು ಎಂದರು.

ಕರ್ನಾಟಕ ಜಾನಪದ ಅಕಾಡೆಮಿಯ ನಮ್ರತ ಎನ್. ಮಾತನಾಡಿ, ನಮ್ಮ ಮೂಲ ಜನಪದೀಯ ಆಟಗಳನ್ನು ಇಂದಿನ ತಲೆಮಾರಿನವರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ವೇಳೆ ಮುಂಡರಗಿಯ ಸಾಹಿತಿ ಡಾ. ನಿಂಗು ಸೊಲಗಿ ಜಾನಪದ ಆಟಗಳ ಕುರಿತು ಉಪನ್ಯಾಸ ನೀಡಿದರು. ಕಲಾವಿದರಾದ ಯಲ್ಲಪ್ಪ ಡಕ್ಕಣ್ಣವರ, ಬಸವರಾಜ ಜಕ್ಕಮ್ಮನವರ, ಯಲ್ಲಪ್ಪ ಚಂದಣ್ಣವರ, ಸಂಕಪ್ಪ ಹುಲ್ಲೂರ, ದುರ್ಗಮ್ಮ ಮಾದರ, ಈರಣ್ಣ ಕಬ್ಬಿಣದ ಹಾಗೂ ಪ್ರಕಾಶ ಕುರುಬರ ಅವರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಕನ್ನಡ ಅಧಾಪಕರ ಸಂಘದ ಅಧ್ಯಕ್ಷ ಪ್ರೊ. ಶಿವಾನಂದ ಕೊರವರ, ಡಾ. ಜಿ.ಬಿ. ಪಾಟೀಲ, ಮೆಹಬೂಬ ಕಿಲ್ಲೇದಾರ, ಪ್ರೊ. ಬಾಹುಬಲಿ ಜೈನರ್, ಗೌಡಪ್ಪ ಬೊಮ್ಮಪ್ಪನವರ, ಸೋಮಶೇಖರ ಚಿಕ್ಕಮಠ, ಬಸವರಾಜ ಈರಣ್ಣವರ, ಶಿವು ಭಜಂತ್ರಿ, ಡಾ. ರಾಜೇಂದ್ರ ಗಡಾದ ಹಾಗೂ ಐ.ಕೆ. ಕಮ್ಮಾರ ಉಪಸ್ಥಿತರಿದ್ದರು.

ಬಸವರಾಜ ಈರಣ್ಣವರ ತಂಡದವರು ಪ್ರಾರ್ಥಿಸಿದರು. ವಾಣಿಜ್ಯ ಮಹಾವಿದ್ಯಾಲಯ ಪ್ರಾ. ಡಾ. ವಿ.ಟಿ. ನಾಯ್ಕರ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಜಾನಪದ ಅಕಾಡೆಮಿಯ ಸದಸ್ಯ ಶಂಕ್ರಣ್ಣ ಸಂಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಕಿರೇಸೂರ ವಂದಿಸಿದರು.