ಕರ್ನಾಟಕ ಜಾನಪದ ಅಕಾಡೆಮಿಯಿಂದ ಕೊಡಮಾಡಲ್ಪಡುವ ವಾರ್ಷಿಕ ಪ್ರಶಸ್ತಿಗೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದದ್ದಿಗಿ ಗ್ರಾಮದ ಜಾನಪದ ಕಲಾವಿದ ಯಂಕನಗೌಡ ದಿದ್ದಿಗಿ ಅವರು ಆಯ್ಕೆಯಾಗಿದ್ದಾರೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ಜಾನಪದ ಅಕಾಡೆಮಿಯಿಂದ ಕೊಡಮಾಡಲ್ಪಡುವ ವಾರ್ಷಿಕ ಪ್ರಶಸ್ತಿಗೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದದ್ದಿಗಿ ಗ್ರಾಮದ ಜಾನಪದ ಕಲಾವಿದ ಯಂಕನಗೌಡ ದಿದ್ದಿಗಿ ಅವರು ಆಯ್ಕೆಯಾಗಿದ್ದಾರೆ.

ನಾಲ್ಕು ದಶಕಗಳಿಂದ ಜಾನಪದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಯಂಕನಗೌಡ ದಿದ್ದಿಗಿ ಅವರನ್ನು ಗುರುತಿಸಿದೆ. ಇವರು ಓದಿದ್ದು ಬರೀ ಐದನೇ ಕ್ಲಾಸು ಆದರೆ ಜಾನಪದ ಕಲೆಯ ಪ್ರದರ್ಶನದಲ್ಲಿ ಪಸ್ಟ್‌ ಕ್ಲಾಸ್‌ ಪಡೆದ ಕಲಾವಿದರಾಗಿದ್ದಾರೆ, ಅದಕ್ಕಾಗಿಯೇ, ಕರ್ನಾಟಕ ಜಾನಪದ ಅಕಾಡೆಮಿ ಮಂಗಳವಾರ ಪ್ರಕಟಿಸಿದ ರಾಜ್ಯದ ವಿವಿಧ ಜಿಲ್ಲೆಗಳ 30 ಕಲಾವಿದರ ಜೊತೆಗೆ ಯಂಕನಗೌಡ ದಿದ್ದಿಗಿ ಅವರು ಸೇರಿದ್ದಾರೆ ಇವರಷ್ಟೇ ಅಲ್ಲದೇ ತಲಾ ಇಬ್ಬರನ್ನು ತಜ್ಞ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಿದೆ.

ಜೀವನ-ಬಾಲ್ಯ: ಜಿಲ್ಲೆ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ 1971 ಜ.1 ರಂದು ಅಮರಮ್ಮ ಮತ್ತು ಅಮರೇಗೌಡ ದಂಪತಿಗಳಿಗೆ ಐದನೇ ಪುತ್ರರಾಗಿ ಜನಿಸಿದ ಯಂಕನಗೌಡ ಅವರು ಸ್ವ-ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿವರೆಗೂ ಓದಿದರು, ನಂತರ ಒಕ್ಕಲುತನ ಮಾಡುತ್ತಲೇ ಸಂಗೀತ ಕಲಿತರು, ತಮ್ಮ ಗುರುಗಳಾದ ದಿ.ದ್ಯಾವಪ್ಪ ಸಾಹುಕಾರ ಉದ್ದಾಳ್‌ ಅವರ ಬಳಿ ಸಂಗೀತಾಭ್ಯಾಸ ಮಾಡಿದ ಯಂಕನಗೌಡ ಅವರು ಸಾವಿರಾರು ಬಯಲಾಟ ಕಾರ್ಯಕ್ರಮದಲ್ಲಿ ದಂಗ(ಮದ್ದಲ್ಲಿ) ನುಡಿಸುವುದು, ರಂಗಭೂಮಿ ಕಲೆಯಲ್ಲಿ ಹಾರ್ಮೋನಿಯಂ ನುಡಿಸುವುದು ಮೈಗೂಡಿಸಿಕೊಂಡರು.

ಅನೇಕ ಹಳ್ಳಿಗಳಲ್ಲಿ ಶರಣರ, ಸಂತರ, ಅನುಭವಿಗಳ ತತ್ವ ಹಾಗೂ ಜಾನಪದ ಹಾಡುವುದರ ಜೊತೆಗೆ, ಹಲವಾರು ರಂಗ ಸಂಚಿಕೆಗಳಲ್ಲಿ ಏಕಾಭಿನಯ ಪಾತ್ರಾಭಿನಯವನ್ನು ಮಾಡುತ್ತಿದ್ದು, ಇವರ ಕಲೆಯನ್ನು ಕಂಡ ಜನರು ತತ್ವಪದ ಭಜನಾ ಗಾಯನ ಗಾರುಡಿಗ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

ಬಂದ ಪ್ರಶಸ್ತಿ ಸಂದ ಗೌರವ: ಜಾನಪದ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಯಂಕನಗೌಡ ಅವರಿಗೆ ಹತ್ತು-ಹಲವು ಪ್ರಶಸ್ತಿಗಳು ಬಂದಿದ್ದು, ಕಾರ್ಯಕ್ರಮಗಳಲ್ಲಿ ನೂರಾರು ಗೌರವಗಳು ಸಂದಿವೆ. 2019ನೇ ಸಾಲಿನ ಗಿರಿಜನ ಉತ್ಸವದಲ್ಲಿ ಪ್ರಶಸ್ತಿ, ಶ್ರೀ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ್ ಹುಬ್ಬಳ್ಳಿ ಏಳನೇ ವರ್ಷದ ರಾಜ್ಯಮಟ್ಟದ ಭಜನ ಕಾರ್ಯಕ್ರಮದಲ್ಲಿ ಪ್ರಶಸ್ತಿ, ರಾಯಚೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2020ನೇ ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರಮದಲ್ಲಿ ಪ್ರಶಸ್ತಿ, 2022ನೇ ಸಾಲಿನ 75ನೇ ಸ್ವತಂತ್ರ್ಯೋತ್ಸವ ಅಮೃತ ಮಹೋತ್ಸವ ಸಾಂಸ್ಕೃತಿಕ ಕಲಾವೈಭವ ಕಾರ್ಯಕ್ರಮದಲ್ಲಿ ಕಲಾಪ್ರಶಸ್ತಿ, 2022ನೇ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಭಾಗವಹಿಸಿ ನೀಡಿದ ಕಾರ್ಯಕ್ರಮಕ್ಕೆ ಗೌರವಿಸಿ ಪ್ರಶಸ್ತಿ ಮತ್ತು ಕೊಪ್ಪಳ ಜಿಲ್ಲೆ ಮೈನಹಳ್ಳಿ ರಾಜ್ಯ ಮಟ್ಟದ ಹೊನಲು ಬೆಳಕಿನ ಭಜನಾ ಕಾರ್ಯಕ್ರದಲ್ಲಿ ಭಾಗವಹಿಸಿದ್ದಕ್ಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

ಬಡತನದಲ್ಲಿಯೇ ಓದಿ, ಕೃಷಿಯನ್ನು ಮಾಡುತ್ತಾ, ಸಂಗೀತ ಕಲಿತು, ಜಾನಪದ ಕ್ಷೇತ್ರದಲ್ಲಿ ಇಷ್ಟು ವರ್ಷಗಳ ಕಾಲ ದುಡಿದ ಫಲವಾಗಿ ಇಂದು ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ನನ್ನನ್ನು ಗುರುತಿಸಿರುವುದು ಸಂತೋಷದ ಸಂಗತಿಯಾಗಿದೆ.

ಯಂಕನಗೌಡ ದಿದ್ದಿಗಿ, ಜಾನಪದ ಕಲಾವಿದ, ರಾಯಚೂರು