ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಜಾನಪದ ಕಲೆಗಳು ಸಮಾಜ ಹಾಗೂ ಸಂಸ್ಕೃತಿಯ ಮೂಲಬೇರಿದ್ದಂತೆ. ಈ ಮೇರು ಕಲಾ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಗುರುವಾರ ಭೈರವೈಕ್ಯ ಡಾ. ಬಾಲಗಂಗಾಧರನಾಥಶ್ರೀಗಳ 52ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶ್ರೀಗುರು ಸಂಸ್ಮರಣೋತ್ಸವದ ಅಂಗವಾಗಿ ನಡೆದ 46ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರೀಮಠದ ಭಕ್ತರು ಈ ಸಂಸ್ಥಾನದ ಬೇರುಗಳಿದ್ದಂತೆ. ಪ್ರತಿವರ್ಷ ಆದಿಚುಂಚನಗಿರಿಯಲ್ಲಿ ನಡೆಯುವ ಜಾನಪದ ಕಲಾ ಮೇಳಕ್ಕೆ ನಾಡಿನಾದ್ಯಂತ ಬರುವ ಸಾವಿರಾರು ಜನಪದರು ತಮ್ಮ ತವರು ಮನೆಗೆ ಬಂದಷ್ಟು ಪ್ರೀತಿಯಿಂದ ಶ್ರೀಕ್ಷೇತ್ರದಲ್ಲಿ ನಡೆಯುವ ಜಾನಪದ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಜನಪದರ ಮನಸ್ಸು ಬಹಳ ನಿರ್ಮಲವಾದದ್ದು. ಇಂತಹ ಕಲೆಯನ್ನು ಉಳಿಸಿ, ಬೆಳೆಸುವ ಜೊತೆಗೆ ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಡಾ.ರಂಗನಾಥ್ ಅವರು ನಿಜವಾದ ಶಾಸನವನ್ನು ರೂಪಿಸುವ ಶಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾರ್ಕೋನಹಳ್ಳಿಯಿಂದ ಈ ಕ್ಷೇತ್ರದ ಮಾರ್ಗವಾಗಿ ಬಹುತೇಕ ಹಳ್ಳಿಗಳಿಗೆ ನೀರು ಒದಗಿಸುವ ಪ್ರಯತ್ನಕ್ಕೆ ಸರ್ಕಾರದ ಮಂಜೂರಾತಿ ಇದ್ದರೂ ಕೂಡ ಅನೇಕ ವಿರೋಧಗಳ ನಡುವೆಯೂ ಡಾ. ರಂಗನಾಥ್ ರವರ ಪ್ರಯತ್ನದಲ್ಲಿ ಈ ಭಾಗದ 150ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತದೆ ಎಂದರು.
1994ರಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಪಟ್ಟಾಭಿಷೇಕದ ಸಲುವಾಗಿ ಜಾನಪದ ಕಲೋತ್ಸವವನ್ನು ಜನಸಾಮಾನ್ಯರ ಕಾರ್ಯಕ್ರಮವಾಗಿ ಜನಗಳ ಸಂಭ್ರಮದಲ್ಲಿ ಗುರುಗಳು ಪಾಲ್ಗೊಂಡು ಆಶೀರ್ವದಿಸಿದ್ದರು. 46ನೇ ಸಮ್ಮೇಳನದ ಸಮಾರೋಪದಲ್ಲಿ ನಾವಿದ್ದೇವೆ ಎಂದು ಹೇಳಿದರು.ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಮಾತನಾಡಿ, ವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಯಾದ ನನಗೆ ಶ್ರೀಮಠದ ಒಡನಾಟ, ಒಲವು ಕಡಿಮೆ ಎಂದೇ ಹೇಳಬೇಕು. ಆದರೆ, ಗುರುಗಳ ಆಶೀರ್ವಾದದ ಸೆಳೆತ ನನ್ನನ್ನು ಸದಾ ಪರಮ ಭಕ್ತನಂತೆ ರೂಪಿಸಿದೆ. ಶ್ರೀಮಠದ ಸೇವೆಯಲ್ಲಿ ಒಬ್ಬ ಸೇನಾನಿಯಂತೆ ನಿಲ್ಲಲು ಸದಾ ಸಿದ್ಧನಿದ್ದೇನೆ. ಶ್ರೀ ಮಠದ ಸೇವೆ ಮತ್ತು ಪ್ರಾರ್ಥನೆಯಲ್ಲಿ ಸದಾಕಾಲ ನೀನಿರಬೇಕೆಂದು ನಮ್ಮ ತಾತ ಹೇಳಿದ್ದರು ಎಂದರು.
ಗುರುಗಳು ಧಾರ್ಮಿಕ, ಆಧ್ಯಾತ್ಮಿಕವಾಗಿ ಬಹಳ ಚೈತನ್ಯದಾಯಕ ಕಾರ್ಯಕ್ರಮಗಳೊಂದಿಗೆ ನಮ್ಮೆಲ್ಲರಿಗೂ ಶಕ್ತಿ ತುಂಬುತ್ತಿದ್ದಾರೆ. ಆಧ್ಯಾತ್ಮಿಕ ಪರಂಪರೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಬಾಲಗಂಗಾಧರನಾಥಶ್ರೀಗಳ ಸಂಕಲ್ಪ ಶಕ್ತಿಯನ್ನು ಸಾಕಾರಗೊಳಿಸಲು ಶಕ್ತಿ ತುಂಬಿದೆ ಎಂದು ತಿಳಿಸಿದರು.ಶ್ರೀಮಠವು ಭಕ್ತರಾದ ನಮ್ಮೆಲ್ಲರ ಆಸ್ತಿ. ನಮ್ಮ ಸ್ವಾಮೀಜಿಗಳ ಕೃಪೆಯ ಈ ಕ್ಷೇತ್ರ ಎಲ್ಲರಿಗೂ ಶ್ರೀರಕ್ಷೆಯಾಗಿದೆ. ನಾಡಿನ ಮೂಲೆ ಮೂಲೆಯಿಂದ ಬಂದ ಪ್ರತಿಯೊಬ್ಬ ಕಲಾವಿದರಿಗೂ ಅವಕಾಶ ನೀಡಿ ಕಲೆಯನ್ನು ಘೋಷಿಸುತ್ತಿರುವುದು ಶ್ರೀಮಠದ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು.
ಭೈರವೈಕ್ಯಶ್ರೀಗಳ ಸಂಕಲ್ಪ ಸಾರ್ಥಕವಾಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಬೆಳೆದು ಬಂದ ನಾನು ವೈಯಕ್ತಿಕವಾಗಿ ಶ್ರೀ ಕ್ಷೇತ್ರಕ್ಕೆ ಲಕ್ಷ ರು. ದೇಣಿಗೆ ನೀಡಿ ಧನ್ಯನಾಗುತ್ತೇನೆ. ನನ್ನಂಥ ಅನೇಕ ಸಾಮಾನ್ಯ ವರ್ಗದವರಿಗೆ ವಿದ್ಯಾಭ್ಯಾಸದ ಜೊತೆಗೆ ಬದುಕು ಕಟ್ಟಿಕೊಳ್ಳಲು ಸಹಕರಿಸಿದ ಶ್ರೀಮಠಕ್ಕೆ ಅವರೆಲ್ಲರ ಪರವಾಗಿ ಅಭಿನಂದಿಸುತ್ತೇನೆ ಎಂದರು.ಖ್ಯಾತ ಗಾಯಕ ಹಾಗೂ ಕಿರುತೆರೆ ನಟ ಶಶಿಧರ ಕೋಟೆ ಮಾತನಾಡಿ, ಕ್ಷೇತ್ರಕ್ಕೆ ಆಗಮಿಸಿ ಸಾರ್ಥಕ ಕ್ಷಣಗಳನ್ನು ಅನುಭವಿಸಿದ್ದೇನೆ. ಗುರುಗಳ ಸಂಪರ್ಕ ಮತ್ತು ಆಶೀರ್ವಾದದಲ್ಲಿ ದಿವ್ಯವಾದ ವಾತಾವರಣ, ಭೈರವನ ಶ್ರೀಕ್ಷೇತ್ರದ ವಿರಾಟ ದರ್ಶನವಾಗಿದೆ. ಶ್ರೀಗಳು ನಮ್ಮೆಲ್ಲರನ್ನು ಆಶೀರ್ವದಿಸಿದ್ದಾರೆ. ನಮ್ಮ ಭಕ್ತಿ ಗೌರವದ ಪ್ರತೀಕವಾಗಿ ಅವರಿಗೆ ದೀರ್ಘ ದಂಡ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಎಂದರು.
ಕಳೆದ ವರ್ಷದ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಮಲ್ಲವ್ವ ಮ್ಯಾಗೇರಿ ಮಾತನಾಡಿದರು. ಎರಡು ದಿನಗಳ ಕಾಲ ನಡೆದ ಜಾನಪದ ಕಲಾ ಪ್ರದರ್ಶನದಲ್ಲಿ ಬಹಳ ಸೊಗಸಾಗಿ ಪ್ರದರ್ಶನ ನೀಡಿದ ತಂಡಗಳಿಗೆ ವೇದಿಕೆಯಲ್ಲಿ ಶ್ರೀಗಳು ಬಹುಮಾನ ವಿತರಿಸಿದರು.ಎಲ್ಲಾ ಕಲಾವಿದರಿಗೆ ಶ್ರೀಮಠದ ವತಿಯಿಂದ ವಸ್ತ್ರಗಳನ್ನು ವಿತರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿ, ಜನಪದ ಜಾತ್ರೆಯನ್ನೇ ಸೃಷ್ಟಿಸಿದರು.
ಸಮಾರಂಭದಲ್ಲಿ ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಂಭುನಾಥಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಆಡಳಿತಾಧಿಕಾರಿ ಡಾ. ಎ.ಟಿ. ಶಿವರಾಮು ಸೇರಿ ಸಹಸ್ರಾರು ಮಂದಿ ಜಾನಪದ ಕಲಾವಿದರು ಇದ್ದರು.