ಕುಶಾಲನಗರ: ಕುಶಾಲನಗರ ಫಾತಿಮಾ ಕಾನ್ವೆಂಟ್ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಅಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.

ಫಾತಿಮಾ ಕಾನ್ವೆಂಟ್ ಶಾಲಾ ಸಭಾಂಗಣದಲ್ಲಿ ನಡೆದ ಸ್ಪರ್ಧೆಯ ಸಂಬಂಧ ನಡೆದ ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕು ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಉದ್ಘಾಟಿಸಿದರು.

ಸುದೀರ್ಘ 50 ವರ್ಷಗಳ ನಿರಂತರ ಪ್ರಯತ್ನದ ಮೂಲಕ ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದು ಅವರು ಹೇಳಿದರು.

ಶಿಕ್ಷಣ ಸಂಸ್ಥೆ ವ್ಯವಸ್ಥಾಪಕರಾದ ಸಿಸ್ಟರ್ ಆಗ್ನೆಸ್, ಜನಪದ ಮನರಂಜನೆಗೆ ಸೀಮಿತವಾಗದೆ ಪಾರಂಪರಿಕ ಶ್ರೀಮಂತ ಕಲೆಯಾಗಿದೆ. ಜನಪದ ಸೊಗಡನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯ ಮಾಡಬೇಕು ಎಂದರು.

ಸಂಸ್ಥೆ ವತಿಯಿಂದ ಬಿಇಓ ಎಂ. ಕೃಷ್ಣಪ್ಪ, ಸಿ.ಆರ್.ಪಿ. ವಿಶ್ವನಾಥ್ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳಾದ ಹಿತೇಶ್ ಮತ್ತು ಹಿರಿಯ ಶಿಕ್ಷಕಿ ಭಾರತಿ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.


ಜನಪದ ಸ್ಪರ್ಧೆಗಳು ಮೂರು ಹಂತಗಳಲ್ಲಿ ನಡೆದು 15 ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ತಂಡ ಪಾಲ್ಗೊಂಡು ಜಾನಪದ ನೃತ್ಯ ಪ್ರದರ್ಶನ ನೀಡಿದವು. ಸಂಸ್ಥೆಯ ವೆಬ್‌ಸೈಟ್ ಅನ್ನು ಬಿಇಒ ಎಂ. ಕೃಷ್ಣಪ್ಪ ಮತ್ತು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮೂಲಕ ಲೋಕಾರ್ಪಣೆ ಮಾಡಲಾಯಿತು.

ಸಂಸ್ಥೆಯ ಪ್ರಮುಖರಾದ ಸಿಸ್ಟರ್ ಅರ್ಪಿತ, ಸಿಸ್ಟರ್ ಫ್ಲೋರೆಟ್, ಸಿಸ್ಟರ್ ಸೋಫಿಯಾ, ಕರ್ನಾಟಕ ಜಾನಪದ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ತೀರ್ಪುಗಾರರು ಇದ್ದರು.

ಶಿಕ್ಷಕಿಯರಾದ ಲಿಜೆಟ್ ನಿರೂಪಿಸಿದರು. ಲೂಸಿ ಸ್ವಾಗತಿಸಿ, ಡೇಸೀ ವಂದಿಸಿದರು.