ಸಾರಾಂಶ
ದಾವಣಗೆರೆ: ಜನಪದ ಸಾಹಿತ್ಯವೆಂದರೆ ಜನಸಾಮಾನ್ಯರಿಂದ ರಚಿಸಲ್ಪಟ್ಟ ಸಾಹಿತ್ಯ. ಜನಪದರು ತಮ್ಮ ಬದುಕಿನ ನೋವು-ನಲಿವು, ಸುಖ-ದುಃಖ, ಆಸರಿಕೆ- ಬ್ಯಾಸರಿಕೆ, ಸೋಲು-ಗೆಲುವು, ಅವಮಾನ- ಬಹುಮಾನ ಬದುಕಿನ ಎಲ್ಲ ಭಾವಗಳನ್ನು ಹಾಗೂ ಅನುಭವಗಳನ್ನು ಹದವಾಗಿ ಎರಕ ಹೊಯ್ದ ಸಾಹಿತ್ಯವೇ ಜನಪದ ಸಾಹಿತ್ಯ ಎಂದು ವಿಶ್ರಾಂತ ಪ್ರಾಚಾರ್ಯೆ ಕೆ.ನೀಲಮ್ಮ ಹೇಳಿದರು.
ನಗರದ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಸಂಜೀವಿನಿ ನರ್ಸಿಂಗ್ ಕಾಲೇಜು, ಶಾರದಾ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆದ ಶಾಲಾ- ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.ಜನಪದ ಮಹಿಳೆ ತನ್ನ ಕಾಯಕ ನಿಷ್ಠೆ, ತವರೂರಿನ ಮೇಲಿರುವ ಪ್ರೀತಿ, ತಂದೆ- ತಾಯಿಗಳ ಮೇಲಿರುವ ಬಾಂಧವ್ಯ, ಮಕ್ಕಳ ಮೇಲಿರುವ ಮಮತೆ, ಪರಸ್ಪರರಲ್ಲಿರುವ ನಂಬಿಕೆ ಅಪನಂಬಿಕೆ, ಮೋಸ ವಂಚನೆ, ಪ್ರೀತಿ- ಪ್ರೇಮ, ಹೀಗೆ ಬದುಕಿನ ಎಲ್ಲ ಭಾವನೆಗಳನ್ನು ಜನಪದ ಸಾಹಿತ್ಯದಲ್ಲಿ ಕಾಣಬಹುದು. ಉತ್ತಮ ಬದುಕಿಗೆ ಬೇಕಾದ ಎಲ್ಲ ಜೀವನ ಮೌಲ್ಯಗಳು ಜನಪದ ಸಾಹಿತ್ಯದಲ್ಲಿವೆ. ಜನಪದ ಸಾಹಿತ್ಯದಲ್ಲಿ ಮಹಿಳೆಯನ್ನು ಮಗುವಾದಾಗಿನಿಂದ ಹಿಡಿದು ಯೌವನ, ದಾಂಪತ್ಯ, ಮುಪ್ಪು, ಪ್ರೀತಿ, ಪ್ರಣಯ, ಸಹೋದರತ್ವ, ಶತ್ರುತ್ವ, ಹೊಂದಾಣಿಕೆ, ನೈತಿಕತೆ, ಆಧ್ಯಾತ್ಮಿಕತೆ, ಸಂಸ್ಕೃತಿ, ಪರಂಪರೆ ಹೀಗೆ ಎಲ್ಲ ಆಯಾಮಗಳಲ್ಲಿಯೂ ಅವಳ ಬದುಕನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದೆ ಎಂದರು. ಅಲ್ಲದೆ, ಜನಪದ ಹಾಡುಗಳನ್ನು ಹಾಡುವ ಮೂಲಕ ವಿವರಿಸಿದರು.
ಶಾರದಾ ವಿದ್ಯಾ ಸಂಸ್ಥೆ ಅಧ್ಯಕ್ಷೆ ಡಾ. ಆರ್.ಎಚ್. ಲೀಲಾವತಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ವೇತಾ ಸಂತೋಷ ಪಾಟೀಲ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ನಿರ್ದೇಶಕ ಷಡಕ್ಷರಪ್ಪ ಎಂ.ಬೇತೂರು, ಕುರ್ಕಿ ಸಿದ್ದೇಶ್, ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ರಶ್ಮಿ, ವಿದ್ಯಾರ್ಥಿಗಳು, ಇತರರು ಇದ್ದರು.- - --1ಕೆಡಿವಿಜಿ32.ಜೆಪಿಜಿ:
ದಾವಣಗೆರೆಯ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಆರ್.ಎಚ್. ಲೀಲಾವತಿ ಉದ್ಘಾಟಿಸಿದರು.