ಜನಪದ ಸಾಹಿತ್ಯ ನಮ್ಮ ಜೀವನಾಡಿ

| Published : Nov 13 2025, 01:15 AM IST

ಸಾರಾಂಶ

ಜನಪದ ಸಾಹಿತ್ಯ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮೌಖಿಕವಾಗಿ ಹರಡಿರುವ ಸಾಹಿತ್ಯವಾಗಿದೆ

ಕೊಪ್ಪಳ: ಜನಪದ ಸಾಹಿತ್ಯ ನಮ್ಮ ಜೀವನಾಡಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಹೇಳಿದರು.

ಅವರು ಮಂಗಳವಾರ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಶ್ರೀ ಕ್ಷೇತ್ರ ಹುಲಿಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಾಡಿರೇ ರಾಗಗಳ ತೂಗಿರೇ ದೀಪಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪದ ಸಾಹಿತ್ಯ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮೌಖಿಕವಾಗಿ ಹರಡಿರುವ ಸಾಹಿತ್ಯವಾಗಿದೆ. ಕಲೆ, ಸಂಸ್ಕೃತಿ ಇದು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸರ್ವರನ್ನು ಒಳಗೊಂಡ ಜೀವನಾಡಿಯಾಗಿದೆ. ಕಲೆ ಮತ್ತು ಸಂಸ್ಕೃತಿ ಉಳಿಯುವಲ್ಲಿ ಕಲಾವಿದರ ಹಾಗೂ ಸಾರ್ವಜನಿಕರ ಪಾತ್ರ ಬಹುದೊಡ್ಡದಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಬೇಕು. ಸರ್ಕಾರ ಕಲಾವಿದರಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕಲಾವಿದರು ಮತ್ತು ಕಲಾ ತಂಡಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ್ ಹಾಗೂ ಕರ್ನಾಟಕ ಬಯಲಾಟ ಪ್ರಶಸ್ತಿ ಪುರಸ್ಕೃತ ತಿಮ್ಮಣ್ಣ ಚನ್ನದಾಸರ್ ಉದ್ಘಾಟಿಸಿದರು.

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್ ಪ್ರಕಾಶ್‌ರಾವ್ ಮಾತನಾಡಿ, ಗ್ರಾಮೀಣ ಭಾಗದ ಜನಪದ ಕಲೆ ಈ ನಾಡನ್ನು ಹಿರಿದಾಗಿಸಿದೆ. ಇಂದಿನ ಯುವ ಪಿಳಿಗೆಯಲ್ಲಿ ಜನಪದದ ಅರಿವೇ ಇಲ್ಲ. ಇಂದಿನ ಯುವ ಪಿಳಿಗೆಗೆ ಜನಪದ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ತಿಳಿಸಿ ಅದನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯ ಹೆಮ್ಮೆಯ ತೊಗಲುಗೊಂಬೆಯಾಟದ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತೊಗಲರು ಗೊಂಬೆಯಾಟದ ಪದ,ಬಯಲಾಟದ ಪದ ಹಾಗೂ ಮುದುಕವ್ವ ಗಂಜಿಹಾಳ ಸಂಗಡಿಗರಿಂದ ಗೀ-ಗೀ ಪದ, ಸಣ್ಣಚಿನ್ನಪ್ಪ ಇವರಿಂದ ಜಾನಪದ ಸಂಗೀತ, ಮಂಜುನಾಥ ಕಟ್ಟಿಮನಿ ಸುಗಮ ಸಂಗೀತ, ಸಂಪ್ರದಾಯದ ಪದ ಡಾ. ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಜಾನಪದ ಕಲಾಸಂಘ ಮಂಡಲಗೇರಿ ಪ್ರಸ್ತುತ ಪಡಿಸಿದರು. ವಿವಿಧ ಕಲಾವಿದರು ಭಾಗಿಯಾಗಿ ಕಾರ್ಯಕ್ರಮ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಹನುಮಂತಪ್ಪ ಕುರಿ ನಿರೂಪಿಸಿದರು.