ಸುಸಂಸ್ಕೃತ ಜೀವನ ಮೌಲ್ಯವೇ ಜನಪದ ಸಾಹಿತ್ಯ

| Published : Nov 06 2024, 12:45 AM IST

ಸಾರಾಂಶ

ಸಂಸ್ಕಾರವಿಲ್ಲದ ಬದುಕು ವ್ಯರ್ಥ, ಜನಪದ ಸಾಹಿತ್ಯಕ್ಕೆ ತ್ರಿಪದಿಗಳ ಕೊಡುಗೆ ಅಪಾರ

ಗದಗ: ಭಾರತ ಕೃಷಿ ಪ್ರಧಾನ ದೇಶ.ಇಲ್ಲಿ ಜಾನಪದ ಹುಟ್ಟಿನಿಂದ ಸಾಯುವವರೆಗೂ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜನಪದದಲ್ಲಿ ನವರಸಗಳು ತುಂಬಿವೆ. ಜನಪದ ಒಳ್ಳೆಯ ಸಂಸ್ಕಾರ ನೀಡುತ್ತದೆ. ನಮ್ಮ ಸಂಸ್ಕೃತಿಯ ಮೂಲ ಬೇರುಗಳು ಜನಪದ ಸಾಹಿತ್ಯದಲ್ಲಿವೆ. ಜಾನಪದ ಸಂಸ್ಕಾರ ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಸಿಸಿಬಿ ಬ್ರಾಂಚ್‌ನ ಸಿಪಿಐ ಜ್ಯೋರ್ತಿಲಿಂಗ ಹೊಸಕಟ್ಟಿ ಹೇಳಿದರು.

ಸ್ಥಳೀಯ ಕನಕದಾಸ ಶಿಕ್ಷಣ ಸಮಿತಿಯ ಕೆಎಸ್ಎಸ್ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ ರಾಷ್ಟ್ರೀಯ ಸೇವಾಯೋಜನೆಯ ಎ ಮತ್ತು ಬಿ ಘಟಕಗಳು, ಸ್ಕೌಟ್ಸ್ ಮತ್ತು ಗೈಡ್ಸ್‌, ಯುಥ್ ರೆಡ್‌ ಕ್ರಾಸ್ ಹಾಗೂ ಕನ್ನಡ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿದ್ಯಾರ್ಥಿ ವಿಕಾಸಕ್ಕಾಗಿ ಜನಪದ ಸಾಹಿತ್ಯ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಸಂಸ್ಕಾರವಿಲ್ಲದ ಬದುಕು ವ್ಯರ್ಥ, ಜನಪದ ಸಾಹಿತ್ಯಕ್ಕೆ ತ್ರಿಪದಿಗಳ ಕೊಡುಗೆ ಅಪಾರವಾದುದು. ಅದು ಜನಪದರ ನಾಲಿಗೆಯ ಮೇಲೆ ಸದಾಕಾಲ ರಾರಾಜಿಸುತ್ತದೆ. ತ್ರಿಪದಿಗಳು ಜನಪದ ಸಾಹಿತ್ಯ ಶ್ರೀಮಂತಗೊಳಿಸಿವೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ, ಏರಿಳಿತಗಳು ಇದ್ದೇ ಇರುತ್ತವೆ. ಇದಕ್ಕೆ ಎದೆ ಗುಂದದೇ ಛಲದಿಂದ ಮುನ್ನುಗ್ಗಬೇಕು. ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು ಆದರೆ ಒಳ್ಳೆಯ ಶಿಕ್ಷಣದ ಜತೆಗೆ ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗಲಾರರು. ಬಡತನ ಮತ್ತು ಹಸಿವು ಯಾವ ವಿಶ್ವವಿದ್ಯಾಲಯಗಳು ಕೊಡದ ಶಿಕ್ಷಣ ಕೊಡುತ್ತವೆ ಎಂದರು.

ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವೀಂದ್ರನಾಥ ಬಿ. ದಂಡಿನ ಮಾತನಾಡಿ, ಬದುಕನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ತಾಂತ್ರಿಕ ಜ್ಞಾನ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಈ ತಾಂತ್ರಿಕ ಜ್ಞಾನದ ಜತೆಗೆ ಕನ್ನಡ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿಯ ಒಳ್ಳೆಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ನಾಗರಿಕರಾಗಬೇಕು ಎಂದರು.

ಪ್ರಾ.ಡಾ. ಡಿ.ಬಿ. ಗವಾನಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಉಪ ಪ್ರಾ.ಡಾ. ಜಿ.ಸಿ.ಜಂಪಣ್ಣನವರ, ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ. ಎಸ್.ಎಸ್.ರಾಯಕರ, ಪ್ರೊ. ಐ.ಕೆ. ಪಟ್ಟಣಶೆಟ್ಟಿ, ಡಾ. ಎ.ಕೆ.ಪೂಜಾರ, ಪ್ರೊ.ನಾಗರಾಜ ಕಡ್ಲಬಾಳು, ಪ್ರೊ. ಸತೀಶ ಅಳಗುಂಡಗಿ. ಪ್ರೊ.ವೈ.ಬಿ.ರೇವಡಕುಂದಿ. ಪ್ರೊ. ಆರ್.ಪಿ. ನದಾಫ್‌ ಹಾಗೂ ಪ್ರಾಧ್ಯಾಪಕರು, ಸಿಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ರಾಷ್ಟ್ರೀಯ ಸೇವಾಯೋಜನೆಯ ಅಧಿಕಾರಿ ಪ್ರೊ. ಎಸ್.ಬಿ. ಪಲ್ಲೇದ ನಿರೂಪಿಸಿದರು. ಪತ್ರಕರ್ತ ಆನಂದಯ್ಯ ವಿರಕ್ತಮಠ ಪರಿಚಯಿಸಿದರು. ಪ್ರೊ. ಐ.ಕೆ. ಪಟ್ಟಣಶೆಟ್ಟಿ ವಂದಿಸಿದರು.