ಸಾರಾಂಶ
ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವೃತ್ತಿಪರತೆ, ಕೌಶಲ್ಯ ಹೊಂದುವುದು ಅನಿವಾರ್ಯ.
ಸಿದ್ದಾಪುರ: ಸ್ಥಳೀಯ ಎಂಜಿಸಿ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಾಲೂಕು ಮಟ್ಟದ ಅಂತರ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಾನಪದ ಗೀತೆ, ಸಮೂಹ ಗಾಯನ, ಚರ್ಚೆ ಹಾಗೂ ಚಿತ್ರಕಲಾ ಸ್ಪರ್ಧೆಗಳು ಜರುಗಿದವು.ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಪ್ರಸಾರಕ ಸಮಿತಿಯ ಹಿರಿಯ ನಿರ್ದೇಶಕ ಜಿ.ಕೆ. ಹೆಗಡೆ ಗೋಳಗೋಡ, ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವೃತ್ತಿಪರತೆ, ಕೌಶಲ್ಯ ಹೊಂದುವುದು ಅನಿವಾರ್ಯ. ವಿದ್ಯಾರ್ಥಿಗಳು ಭವಿಷ್ಯ ಭಾರತದ ಮಾದರಿ ಸತ್ಪ್ರಜೆಗಳಾಗಬೇಕು. ಭವ್ಯ ಭಾರತವನ್ನು ಕಟ್ಟಬೇಕು ಎಂದರು.
ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಅಣ್ಣಪ್ಪ ಶ್ರೀಪಾದ ರಾಯ್ಕರ ಮಾತನಾಡಿ, ತಾನು ಹೆಚ್ಚು ವಿದ್ಯಾವಂತನಾಗದಿದ್ದರೂ ವಿದ್ಯೆಯ ಮಹತ್ವವನ್ನು ಅರಿತು ವಿದ್ಯಾರ್ಥಿಗಳಿಗೆ ಅಲ್ಪ ಪ್ರಮಾಣದಲ್ಲಿ ಪ್ರೋತ್ಸಾಹಿಸುವುದು ನನ್ನ ಜವಾಬ್ದಾರಿ. ನಾಗರಿಕನಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನನ್ನ ಇಷ್ಟದ ಸಂಗತಿ ಎಂದರು.ವಿ.ಕೆ. ನಾಯಕ, ಎಂ.ಜಿ.ಸಿ. ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಶ್ರೀಶೈಲ ಕೊಂಡಗೂಳಿಕರ ಉಪಸ್ಥಿತರಿದ್ದರು.
ಆನಂತರ ತಾಲೂಕು ಮಟ್ಟದ ೮ ಪದವಿಪೂರ್ವ ಕಾಲೇಜುಗಳ ೯೦ ವಿದ್ಯಾರ್ಥಿಗಳಿಗಾಗಿ ಜಾನಪದ ಗೀತೆ, ಸಮೂಹ ಗಾಯನ, ಚರ್ಚೆ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳ ನಿರ್ಣಾಯಕರಾಗಿ ಗಣಪತಿ ಹೆಗಡೆ ಗುಂಜಗೋಡು, ಚೈತನ್ಯ ಹೆಗಡೆ ಸಿದ್ದಾಪುರ, ವಿ. ಸುದರ್ಶನ ಭಟ್ಟ ಗಟ್ಟಿಕೈ, ನಿತಿನ್ ಭಾಸ್ಕರ ಹೆಗಡೆ, ಸುಮಿತ್ರಾ ಬಿ. ಶೇಟ್, ರಾಜೇಂದ್ರ ಕೊಳಗಿ ಭಾಗವಹಿಸಿದ್ದರು.ಸಮಾರೋಪ:
ಮಧ್ಯಾಹ್ನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಶಿ.ಪ್ರ. ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ನೆಲೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮ ಹಾಗೂ ಸಂಸ್ಕೃತಿಯ ಅಸ್ಮಿತೆ ಉಳಿಸುವ ಜವಾಬ್ದಾರಿ ಪ್ರಸ್ತುತ ವಿದ್ಯಾವಂತ ವಿದ್ಯಾರ್ಥಿಗಳದ್ದಾಗಿದೆ. ವಿದ್ಯಾರ್ಥಿಗಳು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಸ್ಪರ್ಧಾಮನೋಭಾವ ಉಳ್ಳವರಾಗಿರಬೇಕು ಎಂದರು.ಹಿರಿಯ ಶ್ರೇಣಿ ಉಪನ್ಯಾಸಕ ವಿ.ಕೆ. ನಾಯಕ ಮಾತನಾಡಿದರು. ಪ್ರಾಚಾರ್ಯ ಪ್ರೊ. ಜಗನ್ನಾಥ ಮೊಗೇರ ಅಧ್ಯಕ್ಷತೆ ವಹಿಸಿದ್ದರು. ಆನಂತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಪ್ರೊ. ಚೇತನಾ ಎಂ.ಎಚ್. ಸ್ವಾಗತಿಸಿದರು, ಆಶಿತಾ ಎ. ಗೌಡರ ಹಾಗೂ ಅಂಜುಂ ಎ. ಸಾಬ್ ಕಾರ್ಯಕ್ರಮ ನಿರೂಪಿಸಿದರು. ಪ್ರೀತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಡಾ. ದೇವನಾಂಪ್ರಿಯ ಎಂ. ವಂದಿಸಿದರು.