ಬಾಳಪ್ಪನವರ ಮಾತಿನಲ್ಲಿ ಸಾಕಷ್ಟು ಹಾಸ್ಯ, ಅರ್ಥ ಇರುತ್ತಿತ್ತು. ಅಲ್ಲಿ ಅಶ್ಲೀಲ ಎಂಬುದು ಇದ್ದಿರಲಿಲ್ಲ. ಬದಲಾಗಿ ಪ್ರೀತಿ ಇರುತ್ತಿತು. ಕಲಬೆರಕೆ ಇಲ್ಲದ ಶುದ್ಧ, ಪ್ರಾಮಾಣಿಕ ವ್ಯಕ್ತಿತ್ವ ಬಾಳಪ್ಪನವರದಾಗಿತ್ತು. ಜನಪದ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ.

ಧಾರವಾಡ:

ದೇಶಿ ಅಥವಾ ಜನಪದ ಎಂದರೆ ಶುದ್ಧ, ಉತ್ತಮವಾದದ್ದು. ಕಲಬೆರಕೆ ಇಲ್ಲದಿರುವುದು. ಅದು ಕೇವಲ ಅನುಭಾವದಿಂದ ಬಂದಿರುವುದು ಎಂದು ಹಿರಿಯ ಚಿಂತಕ ಯರಗಟ್ಟಿಯ ಅಶೋಕ ಹಾದಿಮನಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಸಾವಿರ ಹಾಡಿನ ಸರದಾರ ಹುಕ್ಕೇರಿ ಬಾಳಪ್ಪ ಸ್ಮಾರಕ ದತ್ತಿ ಅಂಗವಾಗಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಳಪ್ಪನವರ ಮಾತಿನಲ್ಲಿ ಸಾಕಷ್ಟು ಹಾಸ್ಯ, ಅರ್ಥ ಇರುತ್ತಿತ್ತು. ಅಲ್ಲಿ ಅಶ್ಲೀಲ ಎಂಬುದು ಇದ್ದಿರಲಿಲ್ಲ. ಬದಲಾಗಿ ಪ್ರೀತಿ ಇರುತ್ತಿತು. ಕಲಬೆರಕೆ ಇಲ್ಲದ ಶುದ್ಧ, ಪ್ರಾಮಾಣಿಕ ವ್ಯಕ್ತಿತ್ವ ಬಾಳಪ್ಪನವರದಾಗಿತ್ತು. ಜನಪದ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದರು.

ಜಾನಪದ ತಜ್ಞ ಡಾ. ರಾಮು ಮೂಲಗಿ ಮಾತನಾಡಿ, ಮೂಲ ಜಾನಪದ ಇಂದು ನಶಿಸುತ್ತಿದೆ. ಜಾನಪದದ ಹೆಸರಿನಲ್ಲಿ ಅಶ್ಲೀಲತೆ ಮುನ್ನಲೆಗೆ ಬರುತ್ತಿದೆ. ಇದು ನಿಲ್ಲಬೇಕು. ಮೂಲ ಜಾನಪದದ ಮೂಲಕ ಜನಪದ ಕ್ಷೇತ್ರಕ್ಕೆ ದೊಡ್ಡ ಹೆಸರು ತಂದಕೊಟ್ಟ ಬಾಳಪ್ಪನವರು ಮಾದರಿಯಾಗಬೇಕು. ಬಾಳಪ್ಪನವರ ವೇಷಭೂಷಣ, ಅವರ ಜವಾರಿ ಭಾಷೆ, ಸೊಗಡು ತುಂಬಾ ಅರ್ಥಗರ್ಭಿತವಾಗಿರುತ್ತಿತ್ತು. ರಾಷ್ಟ್ರಕವಿ ಕುವೆಂಪು ಮುಂತಾದ ಕವಿಗಳು ಬರೆದ ಹಾಡುಗಳನ್ನು ತಮ್ಮ ಕಂಚಿನ ಕಂಠದಿಂದ ಹಾಡಿ ಹಾಡಿಗೆ ಜೀವ ತುಂಬಿ ಕವಿಗಳನ್ನು ಮೆರೆಸಿ ಜನಪ್ರಿಯಗೊಳಿಸಿದವರು ಎಂದು ಹೇಳಿದರು.

ದತ್ತಿ ದಾನಿ ಅಂದಾನೆಪ್ಪ ಬಾಳಪ್ಪ ಹುಕ್ಕೇರಿ, ಶಂಕರ ಕುಂಬಿ, ಡಾ. ಧನವಂತ ಹಾಜವಗೋಳ, ಡಾ. ಮಹೇಶ ಹೊರಕೇರಿ, ಶಿವಾನಂದ ಭಾವಿಕಟ್ಟಿ, ಮೇಘಾ ಹುಕ್ಕೇರಿ ಸೇರಿದಂತೆ ಇತರರು ಇದ್ದರು.