ಇಂದಿಗೂ ನಮ್ಮ ಹಬ್ಬ, ಉತ್ಸವಗಳು ಜಾನಪದೀಯ ರೂಢಿಯಲ್ಲಿಯೇ ಇರುವುದನ್ನು ಯಾರೂ ಮರೆಯುವಂತಿಲ್ಲ. ಇದರರ್ಥ ಜಾನಪದ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದು ಯಕ್ಷ ಸಾಹಿತಿ ರಮೇಶ್ ಹೆಗಡೆ ಗುಂಡೂಮನೆ ಅಭಿಪ್ರಾಯಪಟ್ಟರು.

ಸಾಗರ: ಇಂದಿಗೂ ನಮ್ಮ ಹಬ್ಬ, ಉತ್ಸವಗಳು ಜಾನಪದೀಯ ರೂಢಿಯಲ್ಲಿಯೇ ಇರುವುದನ್ನು ಯಾರೂ ಮರೆಯುವಂತಿಲ್ಲ. ಇದರರ್ಥ ಜಾನಪದ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದು ಯಕ್ಷ ಸಾಹಿತಿ ರಮೇಶ್ ಹೆಗಡೆ ಗುಂಡೂಮನೆ ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಪರಿಷತ್ತಿನ ಸಾಗರ ಶಾಖೆ, ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಂಸ್ಕೃತಿಕ ಮತ್ತು ಕನ್ನಡದ ವಿಭಾಗದ ಆಶ್ರಯದಲ್ಲಿ ಏರ್ಪಡಿಸಿದ್ದ ಯುವ ಜನತೆ ಮತ್ತು ಜಾನಪದ ಮಾತು, ಮಂಥನ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಪ್ರಸ್ತುತ ನಮ್ಮ ಜೀವನ ವಿಕಾಸದ ಹಾದಿಯಲ್ಲಿ ನಾಗಾಲೋಟದಿಂದ ಸಾಗುತ್ತಿದೆ. ನಮಗೆ ಅರಿವಿಲ್ಲದಂತೆ ಬೇರೆಬೇರೆ ಜೀವನ ಕ್ರಮಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವ ಪ್ರಯತ್ನವೂ ಸಾಗಿದೆ. ಆದರೆ ನಮ್ಮ ಜಾನಪದೀಯ ಜೀವನದ ಮೂಲ ಬೇರು ಗಟ್ಟಿಯಾಗಿರುವ ಕಾರಣ ಅದರಿಂದ ಕಳಚಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಿದರು.

ಅಕ್ಷಯ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಜಾನಪದ ಪರಿಷತ್ತು ಸಾಗರದ ಗೌರವಾಧ್ಯಕ್ಷರು ಆದ ಬಿ.ಜಿ.ದಿನೇಶ್ ಕಾರ್ಯಕ್ರಮ ಉದ್ಘಾಟಿಸಿ, ಮುಂದಿನ ಪೀಳಿಗೆಗೆ ಜನಪದವನ್ನು ತಲುಪಿಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಗೆ ಇದೆ ಎಂದರು.

ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ ಮಾತನಾಡಿದರು. ಕಾಲೇಜು ಪ್ರಭಾರ ಪ್ರಾಚಾರ್ಯ ರವೀಂದ್ರ ಕಾಟೋಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ರತ್ನಾಕರ್ ಸಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಶಿವಾನಂದ ಎಸ್.ಭಟ್, ಉಪನ್ಯಾಸಕ ರಮೇಶ್, ಕೆ.ನಾರಾಯಣ, ಬಸವರಾಜ್ ಇದ್ದರು. ನಂತರ ಜಾನಪದ ಪರಿಷತ್ತಿನ ಕಲಾವಿದರು ಹಾಗೂ ಕಾಲೇಜು ವಿದ್ಯಾರ್ಥಿಗಳು ಗಾಯನ ನಡೆಸಿಕೊಟ್ಟರು.