ಸಾರಾಂಶ
ಗ್ರಾಮೀಣ ಜನ ಜೀವನದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಹಳ್ಳಿ ಮನೆಗಳಲ್ಲಿ ಕೆಲಸವನ್ನು ನಿರ್ವಹಿಸುವಾಗ ಮಹಿಳೆಯರು ಬಳಸುವ ಹಾಡುಗಳಾದ ಕೊರವಂಜಿ ಹಾಡು, ಮಳೆಗಾಗಿ ಗುರ್ಜಿ ಆಟ, ಜೋಕುಮಾರನ ಹಾಡುಗಳು ಧಾರ್ಮಿಕ ಆಚರಣೆಗಳು ಅರ್ಥಪೂರ್ಣವಾಗಿರಲು ಜಾನಪದ ಹಾಡಿನ ಸೊಗಡು ನಿರಂತರವಾದದ್ದು ಎಂದು ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.
ಡಂಬಳ: ಗ್ರಾಮೀಣ ಜನ ಜೀವನದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಹಳ್ಳಿ ಮನೆಗಳಲ್ಲಿ ಕೆಲಸವನ್ನು ನಿರ್ವಹಿಸುವಾಗ ಮಹಿಳೆಯರು ಬಳಸುವ ಹಾಡುಗಳಾದ ಕೊರವಂಜಿ ಹಾಡು, ಮಳೆಗಾಗಿ ಗುರ್ಜಿ ಆಟ, ಜೋಕುಮಾರನ ಹಾಡುಗಳು ಧಾರ್ಮಿಕ ಆಚರಣೆಗಳು ಅರ್ಥಪೂರ್ಣವಾಗಿರಲು ಜಾನಪದ ಹಾಡಿನ ಸೊಗಡು ನಿರಂತರವಾದದ್ದು ಎಂದು ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.
ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಕೆ.ಎಲ್.ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರೊ. ಸಿದ್ದಲಿಂಗಸಜ್ಜನ ಶೆಟ್ಟರ್ ಮಾತನಾಡಿ, ಜನಪದ ಸಾಹಿತ್ಯವು ಜನರ ದೈನಂದಿನ ಜೀವನದ ದಣಿವನ್ನು ಆರಾಮದಾಯಕ ಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೃಷಿ ಕಾರ್ಯಗಳಾದ ಬಿತ್ತುವುದು, ಕಳೆ ತೆಗೆಯುವುದು, ಒಕ್ಕಲು ಮಾಡುವುದು. ಬೀಸುವ ಕಾರ್ಯಗಳಲ್ಲಿ ಆದ ದಣಿವಿನಿಂದ ಮನಸ್ಸಿಗೆ ಆಹ್ಲಾದ ಉಂಟುಮಾಡುವ ದಿಸೆಯಲ್ಲಿ ಜನಪದ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಜನಪದ ಸಾಹಿತ್ಯದ ಬೆಳೆದು ಬಂದ ಹಾದಿಯಲ್ಲಿ ಜನಪದ ಸಾಹಿತ್ಯವು ಜನರ ಬಾಯಿಂದ ಬಾಯಿಗೆ ನಿರಂತರವಾಗಿ ಜನಪದ ಗೀತೆ, ಜನಪದ ಕಥೆ, ಮಹಾಕಾವ್ಯ, ಗಾದೆ, ಒಡಪು, ಒಗಟು, ಉಡುಗೆ-ತೊಡುಗೆ, ಆಹಾರ ಪದ್ದತಿ, ಜೀವನ ವಿಧಾನ ಒಂದು ತಲೆಮಾರಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಮುಂದುವರೆದು ನಮ್ಮ ಪೂರ್ವಜರ ಜ್ಞಾನ, ಜೀವನ ವಿಧಾನ ತಿಳಿಯಲು ದಾರಿದೀಪಗಳಾಗಿವೆ. ಕನ್ನಡ ಜನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ ನಮ್ಮ ಕನ್ನಡ ಜಾನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಜನಪದ ಸಾಹಿತ್ಯದ ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಜೋಪಾನ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು. ಕಾರ್ಯಕ್ರಮದ ಮಧ್ಯೆ ಮಕ್ಕಳೊಂದಿಗೆ ಒಗಟು, ಜನಪದ ಗೀತೆಗಳನ್ನು ಹೇಳಿ ರಂಜಿಸಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಸಿಬ್ಬಂದಿವರ್ಗ ವಿದ್ಯಾರ್ಥಿಗಳು ಇದ್ದರು.