ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಜನಪದವೆಂಬುದು ದೇಶದ ಸಂಪತ್ತು. ಜನಪದ ಸಂಸ್ಕೃತಿ ದೇಶದ ಹಿರಿಮೆಯಾಗಿದೆ. ಜನಪದ ದೇಶದ ದೊಡ್ಡ ಸಂಸ್ಕೃತಿಯಾಗಿದೆ ಎಂದು ಬೆಳ್ಳಾವಿ ಶ್ರೀ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ ಜನಪದ ಕಲೆ ಕುರಿತು ವ್ಯಾಖ್ಯಾನಿಸಿದರು.ತುಮಕೂರು ಜಿಲ್ಲಾ ಜನಪದ ಕಲಾವಿದರ ಸಂಘದ ವತಿಯಿಂದ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಸಲಾದ ೫ ನೇ ವರ್ಷದ ಜನಪದ ಕಲಾ ಉತ್ಸವ ೨೦೨೫ ನ್ನು ಉದ್ಘಾಟಿಸಿ ಅವರು ಅವರು ಮಾತನಾಡುತ್ತಿದ್ದರು.
ಜನಪದ ಕಲಾವಿದರು ಅವಿದ್ಯಾವಂತರಾಗಿದ್ದರೂ ಸಹ ಅವರಲ್ಲಿ ಅಡಗಿರುವ ಕಲಾಶಕ್ತಿ ವಿದ್ಯೆಗಿಂತಲೂ ಮಿಗಿಲಾದದ್ದು. ಕಲಾವಿದರು ಕೇವಲ ರಂಜಿಸುವುದಕ್ಕೆ ಮಾತ್ರ ಸೀಮಿತರಾಗಬಾರದು. ಇತ್ತೀಚೆಗೆ ಜನಪದ ಕಲೆ ಎಂಬುದು ಗಗನ ಕುಸುಮದಂತಾಗಿದೆ. ಇಂದಿನ ಕಲಾವಿದರು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ. ಇತ್ತೀಚೆಗೆ ಹೃದಯಾಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳದ ಸಂಗತಿ. ಸೂರ್ಯನ ಕಿರಣ, ದೇಹ ದಂಡನೆ, ಆಹಾರದ ಕ್ರಮ, ವಿಶ್ರಾಂತಿ, ಆತ್ಮಸ್ಥೈರ್ಯ ಹಾಗೂ ಒಳ್ಳೆ ಸ್ನೇಹಿತರನ್ನು ಸಂಪಾದಿಸಿದಲ್ಲಿ ಮನುಷ್ಯ ಆರೋಗ್ಯದಿಂದಿರಲು ಸಾಧ್ಯವಾಗಲಿದೆ ಎಂದರು.ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ್ ಕೆಂಕೆರೆ ಮಾತನಾಡುತ್ತಾ, ಕಲಾವಿದರ ಕಾರ್ಯಕ್ರಮಕ್ಕೆ ರಾಜಕಾರಣಿಗಳು ಬರುವುದು ವಿರಳವಾಗಿದೆ. ಅವರು ಕಲಾವಿದರನ್ನು ಬಳಸಿಕೊಳ್ಳುತ್ತಾರಷ್ಟೇ ಎಂದು ಬೇಸರಿಸಿದರು. ಇತ್ತೀಚಿನ ದಿನಗಳಲ್ಲಿ ಹಳೆ ತಲೆಮಾರಿನ ಕಲೆಗಳು ನಶಿಸುತ್ತಿದ್ದು ಅವನ್ನು ಉಳಿಸಿ ಬೆಳೆಸುವ ಕೆಲಸಗಳಾಗಬೇಕಿದೆ. ಒಬ್ಬ ವ್ಯಕ್ತಿ ಸತ್ತರೆ ಮತ್ತೊಬ್ಬ ವ್ಯಕ್ತಿ ಹುಟ್ಟುತ್ತಾನೆ. ಆದರೆ ಒಬ್ಬ ಕಲಾವಿದ ಸತ್ತರೆ ಆತನೊಂದಿಗೇ ಅವನು ಕರಗತ ಮಾಡಿಕೊಂಡಿದ್ದ ಕಲೆ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತದೆ. ಸರ್ಕಾರ ಕಲಾವಿದರನ್ನು ಪೋಷಿಸುವ ಕೆಲಸ ಮಾಡಬೇಕಿದೆ. ಸರ್ಕಾರ ಕಲಾವಿದ ಮಾಶಾಸನವನ್ನು ೫ ಸಾವಿರ ರು.ಗಳಿಗೆ ಏರಿಸಬೇಕೆಂದೂ ಸಹ ಸರ್ಕಾರವನ್ನು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊಂಡಜ್ಜಿ ವಿಶ್ವಣ್ಣ, ತಾ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ, ಕಿರುತೆರೆ ಕಲಾವಿದ ದಂಡಿನಶಿವರ ಈಶ್ವರ ದಲ ಕಲಾವಿದರ ಕುರಿತಂತೆ ಮಾತನಾಡಿದರು.ದೊಡ್ಡಗುಣಿ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಜನಪದ ಕಲಾವಿದರನ್ನು ಗುರುತಿಸಿ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ರವಿರಾಜ್ ಕರಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಎನ್.ಶಂಕರೇಗೌಡ, ಮುಖಂಡರಾದ ಸಿದ್ದೇಗೌಡ, ಕೆ.ಸಿ.ನರಸಿಂಹಮೂರ್ತಿ, ಹೆಚ್.ಎನ್.ಸುರೇಶ್, ರಾಮಯ್ಯ, ಕಲಾವಿದರಾದ ಡಾ. ಕಂಟಲಗೆರೆ ಕೆ.ಸಣ್ಣಹೊನ್ನಯ್ಯ, ಚಿಕ್ಕಉಡೇದಯ್ಯ, ನಟರಾಜ್, ಬೋರೇಗೌಡ, ಡಿ.ಟಿ.ವೆಂಕಟೇಶ್, ಧನಂಜಯ್, ಶಿವಲಿಂಗಯ್ಯ ಸೇರಿದಂತೆ ಜಿಲ್ಲೆಯಾದ್ಯಂತ ಅನೇಕ ಕಲಾವಿದರು ಜನಪದ ಕಲಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಶಾಸಕ ಮಸಾಲ ಜಯರಾಮ್ ಜನಪದ ಕಲಾ ಉತ್ಸವಕ್ಕೆ ಚಾಲನೆ ನೀಡಿದರು. ಸೋಮನ ಕುಣಿತ, ಧ್ವಜ ಕುಣಿತ, ಲಿಂಗದವೀರರ ಕುಣಿತ, ಚಿಲಿಪಿಲಿ ಗೊಂಬೆಗಳು, ವಿವಿಧ ವಾದ್ಯಮೇಳಗಳು ಸೇರಿದಂತೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಿಂದ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.