ಜಾನಪದ ನಮ್ಮ ಬದುಕಿನ ಜೀವನಾಡಿ: ಕುಂಬಾರ ಭುವನೇಶ

| Published : Apr 10 2025, 01:01 AM IST

ಸಾರಾಂಶ

ಜಾನಪದ ನಮ್ಮ ಬದುಕಿನ ಜೀವನಾಡಿಯಾಗಿದ್ದು ದೇಸೀಯ ಸಂಸ್ಕೃತಿ, ಸಂಪ್ರದಾಯ, ವಾಸ್ತವ ಬದುಕನ್ನು ನಿರೂಪಿಸುತ್ತದೆ.

ಮೋಕಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಾನಪದ ಸಂಭ್ರಮ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಾನಪದ ನಮ್ಮ ಬದುಕಿನ ಜೀವನಾಡಿಯಾಗಿದ್ದು ದೇಸೀಯ ಸಂಸ್ಕೃತಿ, ಸಂಪ್ರದಾಯ, ವಾಸ್ತವ ಬದುಕನ್ನು ನಿರೂಪಿಸುತ್ತದೆ ಎಂದು ಹಿರಿಯ ಲೇಖಕ ಕುಂಬಾರ ಭುವನೇಶ ಮೋಕಾ ತಿಳಿಸಿದರು. ತಾಲೂಕಿನ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಹಾಗೂ ಸಾಂಸ್ಕೃತಿಕ ಸಮಿತಿಯ ಸಹಯೋಗದಲ್ಲಿ ಜರುಗಿದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾನಪದ ಎಂಬುದು ಬರೀ ಸಾಹಿತ್ಯ ವಲಯಕ್ಕಷ್ಟೇ ಸೀಮಿತಗೊಂಡಿದ್ದಲ್ಲ. ದೇಸೀ ಬದುಕಿನಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಜಾನಪದ ಸಾಹಿತ್ಯದಷ್ಟೇ ಜಾನಪದ ಆಚರಣೆಗಳು ಕೂಡ ನಮ್ಮ ಬದುಕನ್ನು ಕ್ರೀಯಾಶೀಲಗೊಳಿಸಿವೆ. ಜಾನಪದ ಗ್ರಾಮ್ಯ ಬದುಕಿನ ಸೆಲೆಯಾಗಿದ್ದು ಇಂದಿಗೂ ಗ್ರಾಮೀಣ ಪರಿಸರದಲ್ಲಿ ಜಾನಪದ ಆಚರಣೆಗಳು ಜೀವಂತವಾಗಿವೆ ಎಂದು ತಿಳಿಸಿದರು.

ಬಳ್ಳಾರಿ ವಿ.ಎಸ್.ಕೆ. ವಿಶ್ವವಿದ್ಯಾಲಯದ ನಾಟಕ ವಿಭಾಗದ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಮಕಾಂದಾರ ಮಾತನಾಡಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಬಕಾಡೆ ಪಂಪಾಪತಿ, ಮೊಹಮದ್ ಅಸ್ಲಾಂ ಹಾಗೂ ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು.

ಶಿಕ್ಷಣ ಪ್ರೇಮಿ ಡಿ.ರಾಮಣ್ಣ, ಮುಖಂಡರಾದ ಚಂದ್ರಶೇಖರ ಸ್ವಾಮಿ, ಸುಣ್ಣದ ಮಲ್ಲಿಕಾರ್ಜುನ, ಮರೆಪ್ಪ ಗೌಡ, ಹೊನ್ನೂರು ಸ್ವಾಮಿ, ಮಲ್ಲಿಕಾರ್ಜುನ ಹಾಗೂ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ. ಕಲಾವತಿ ಬಿ.ಜಿ., ಸಾಂಸ್ಕೃತಿಕ ಸಂಚಾಲಕ ಅಮಲ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಬಿ. ಸರೋಜಾ, ಇಂಗ್ಲಿಷ್ ಪ್ರಾಧ್ಯಾಪಕ ಪ್ರವೀಣ್ ಎ.ಎಂ.ಪಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಮಾಟೂರು ಬಸವರಾಜ, ಕಚೇರಿ ಅಧೀಕ್ಷಕಿ ಸಾವಿತ್ರಿ, ದೈಹಿಕ ನಿರ್ದೇಶಕ ಶ್ರೀನಿವಾಸ್, ಗ್ರಂಥಪಾಲಕ ಸಿ. ಪಂಪಾಪತಿ, ಪ್ರಾಧ್ಯಾಕರಾದ ಡಾ. ಜಗದೀಶ, ಡಾ. ಹರೀಶ, ಡಾ. ಬೋರಯ್ಯ, ಡಾ. ಮಂಜುನಾಥ, ನವೀನ್ ಕುಮಾರ್, ಡಿ ಗ್ರೂಪ್ ನೌಕರ ಮಂಜುನಾಥ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಎತ್ತಿನಬಂಡಿ ಹಾಗೂ ವಿವಿಧ ಕಲಾ ತಂಡಗಳ ಮೆರವಣಿಗೆ ನಡೆಯಿತು. ಜಾನಪದ ಉತ್ಸವ ಅಂಗವಾಗಿ ಕಾಲೇಜಿನ ಆವರಣದಲ್ಲಿ ಜೋಳದ ಕಣ, ಮೆಣಸಿನಕಾಯಿ ರಾಶಿ, ವಿವಿಧ ಧಾನ್ಯಗಳು ಹಾಗೂ ಜನಪದರು ನಿತ್ಯ ಬಳಕೆ ಮಾಡುವ ಕೃಷಿ ಸಲಕರಣೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಿದ್ಯಾರ್ಥಿನಿಯರು ಕಾಲೇಜಿನ ಮಹಿಳಾ ಸಿಬ್ಬಂದಿಗಳಿಗೆ ಹಸಿರುಬಳೆ ತೊಡಿಸಿದರು.

ಸಮಾರಂಭದ ವೇದಿಕೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಭಜನಾ ಕಲಾವಿದರು, ತೊಗಲುಗೊಂಬೆ ಕಲಾವಿದರು, ನಾಟಕ ಮತ್ತು ರಂಗ ಕಲಾವಿದರು ಪಾಲ್ಗೊಂಡು ಜಾನಪದ ಉತ್ಸವಕ್ಕೆ ಮೆರಗು ತಂದರು. ಮೋಕ ಗ್ರಾಮದ ವಿರೂಪಾಕ್ಷಪ್ಪ ಜಾನಪದ ಒಡಪು ಹೇಳಿದರೆ, ಮೋಕ ಮಲ್ಲಿಕಾರ್ಜುನ ಸ್ವಾಮಿ ಭಜನಾ ಮಂಡಳಿಯವರು ಭಜನಾ ಗೀತೆ ಹಾಡಿದರು. ಬಳ್ಳಾರಿಯ ಹುಲಿಕುಂಟೇಶ್ವರ ತೊಗಲುಗೊಂಬೆ ಸಂಘದಿಂದ ಶ್ರೀಕೃಷ್ಣದೇವರಾಯ ಚರಿತೆ ತೊಗಲುಗೊಂಬೆ ಪ್ರದರ್ಶನ ಗಮನ ಸೆಳೆಯಿತು. ಜಾನಪದ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಜಾನಪದ ಕ್ರೀಡೆಗಳಾದ ಗೋಲಿಯಾಟ, ಬುಗುರಿಯಾಟ, ಲಗೋರಿಯಾಟ, ರಂಗೋಲಿ ಸ್ಪರ್ಧೆ, ಜಾನಪದ ಶೈಲಿಯ ಆಹಾರ ಮೇಳಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.