ಸಾರಾಂಶ
ಕನ್ನಡ ಜಾನಪದ ಪರಿಷತ್ ಘಟಕದ ಪದಗ್ರಹಣ ಹಾಗೂ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಾತ್ಯಾತೀತ ಹಾಗೂ ಧರ್ಮಾತೀತವಾದ ಜಾನಪದ ಸೊಗಡಿಗೆ ಎಂದಿಗೂ ಸಾವಿಲ್ಲ. ನಿರಂತರ ಬದಲಾವಣೆಯತ್ತ ಹೆಜ್ಜೆ ಹಾಕುವ ಜಾನಪದ ಶಕ್ತಿ ಪ್ರಪಂಚದ ಎಲ್ಲಾ ಧರ್ಮದಲ್ಲಿ ವಿಭಿನ್ನವಾಗಿ ಪಸರಿಸಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಶನಿವಾರ ನಡೆದ ತಾಲೂಕು ಕನ್ನಡ ಜಾನಪದ ಪರಿಷತ್ ಘಟಕದ ಪದಗ್ರಹಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೂರ್ವಿಕರ ಆಡು ಭಾಷೆಯಲ್ಲಿ ಹುಟ್ಟಿದ ಜಾನಪದ ಗೀತೆಗಳು, ತತ್ತ್ವ ಪದಗಳು ಇಂದಿನ ಕಾಲಮಾನಕ್ಕೆ ಪ್ರಸ್ತುತವಾಗಿವೆ. ಇತ್ತೀಚಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಮೊಬೈಲ್, ಕಂಪ್ಯೂಟರ್ ನಿಂದಲೂ ಜಾನಪದ ಮೂಲ ಬೇರನ್ನು ಅಳಿಸಲು ಸಾಧ್ಯವಿಲ್ಲ ಎಂದ ಅವರು, ಬಾಲ್ಯದಲ್ಲೇ ಜಾನಪದ ಸಂಸ್ಕೃತಿ ಪರಿಚಯಿಸಬೇಕು ಎಂದು ಹೇಳಿದರು.
ಹೃದಯ ಶ್ರೀಮಂತಿಕೆ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆ ಕಟ್ಟಿಕೊಡುವ ದೇಶದ ಮೊದಲ ಮೂಲ ಪರಂಪರೆ ಜಾನಪದ ಸಾಹಿತ್ಯ ಹಾಗೂ ಸಂಸ್ಕೃತಿ. ಹೀಗಾಗಿ ಪರಂಪರೆ ಉಳಿಸಿ, ಬೆಳೆಸಿ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಜಾನಪದಾಸಕ್ತರ ಮೇಲಿದೆ ಎಂದು ತಿಳಿಸಿದರು.ಜನರಿಂದ, ಜನರಿಗಾಗಿ, ಸಾಮಾನ್ಯ ಜನರೇ ರಚಿಸಿದ ಸಾಹಿತ್ಯ ಜಾನಪದ. ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಾಲೂಕು, ಮಹಿಳಾ ಹಾಗೂ ಯುವ ಘಟಕಗಳನ್ನು ಸ್ಥಾಪಿಸಿ ಸ್ಥಳೀಯ ಕಲಾಸಕ್ತರನ್ನು ಪ್ರೇರೇಪಿಸಲಾಗುತ್ತಿದೆ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಾನಪದ ಪರಿಚಯಿಸುವ ನಿಟ್ಟಿನಲ್ಲಿ ಸಭೆ ಅಥವಾ ಸಮಾರಂಭ ನಡೆಸಿದರೆ ಸಾಲದು. ಪ್ರತಿ ಹಳ್ಳಿಗಳಲ್ಲಿ ಗ್ರಾಮ ಸಮ್ಮೇಳನ ಆಯೋಜಿಸಿ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಬಯಲಾಟ, ದೊಡ್ಡಾಟ ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣ ಬಹುದು. ಕನ್ನಡ ಜಾನಪದ ಸಂಸ್ಕೃತಿ ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿದೆ ಎಂದರು.ನೂತನ ತಾಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ ಮಾತನಾಡಿ, ಸಿನಿಮಾ ಚಿತ್ರಗೀತೆಗಳು ಸಮಾಜದಲ್ಲಿ ಪ್ರಚಲಿತದಲ್ಲಿದ್ದು ಅವುಗಳನ್ನು ಮೀರಿಸುವಂತೆ ಜಾನಪದ ಗೀತೆಗಳಿಗೆ ಒತ್ತು ಕೊಡುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಪೂರ್ವಿಕರ ಜಾನಪದ ತೇರನ್ನು ಮುಂದಿನ ಪೀಳಿಗೆಗೆ ಕರೆದೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರು ವಹಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.ಕಜಾಪ ಜಿಲ್ಲಾ ಖಜಾಂಚಿ ಎಚ್.ಸಿ.ವಿಜಯ್‌ಕುಮಾರ್ ಮಾತನಾಡಿದರು. ಕಜಾಪ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ರಾಯಭಾರಿ ನಾಗರಾಜ್ ರಾವ್ ಕಲ್ಕಟ್ಟೆ, ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಾಂತಮೂರ್ತಿ, ರಂಗಕರ್ಮಿ ರವಿಕುಮಾರ್, ಚಲನಚಿತ್ರ ನಿರ್ದೇಶಕ ಜಯರಾಮ್ ಉಪಸ್ಥಿತರಿದ್ದರು.ತಾಲ್ಲೂಕು ಪದಾಧಿಕಾರಿಗಳ ಆಯ್ಕೆ :ತಾಲ್ಲೂಕು ಅಧ್ಯಕ್ಷರಾಗಿ ಅಶೋಕ್ ರಾಜರತ್ನಂ, ಕಾರ್ಯದರ್ಶಿ ಬಿ.ಜಿ.ಮಧು, ಖಜಾಂಚಿ ಎಂ.ಪಿ.ಜಯರಾಮ್, ಜಂಟಿ ಕಾರ್ಯದರ್ಶಿ ಜಿ.ಹನುಮಂತು, ಪತ್ರಿಕಾ ಕಾರ್ಯದರ್ಶಿ ಎ.ಶ್ರೀನಾಥ್, ಸಂಘಟನಾ ಕಾರ್ಯದರ್ಶಿ ಎನ್.ಎಂ.ಮಹೇಶ್, ಸಂಚಾಲಕ ಮಹೇಂದ್ರ, ಸದಸ್ಯರು ಗಳಾಗಿ ರಾಕೇಶ್ ಸಿಂಗ್, ಹರ್ಷಿತ್, ಸಮ್ಮಿತ್, ದೇವರಾಜು, ಕುಮಾರೇಶನ್, ದರ್ಶನ್ ಆಯ್ಕೆಯಾಗಿದ್ದಾರೆ.ಪೋಟೋ ಫೈಲ್ ನೇಮ್ 16 ಕೆಸಿಕೆಎಂ 5ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಶನಿವಾರ ನಡೆದ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಘಟಕದ ಪದಗ್ರಹಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಾ. ಜಾನಪದ ಎಸ್. ಬಾಲಾಜಿ ಅವರು ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ನಾಗರಾಜ್‌ರಾವ್ ಕಲ್ಕಟ್ಟೆ, ಅಶೋಕ್ ರಾಜರತ್ನಂ ಹಾಗೂ ಪದಾಧಿಕಾರಿಗಳು ಇದ್ದರು.