ಕನ್ನಡಪ್ರಭ ವಾರ್ತೆ ಪಾಂಡವಪುರ

ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಆಧುನೀಕರಣದ ಭರಾಟೆಯಲ್ಲಿ ಜಾನಪದ ಕಲೆ ನಶಿಸಿದಂತೆ ಕಂಡರೂ ಅದು ಎಂದಿಗೂ ನಶಿಸುವುದಿಲ್ಲ. ಬದಲಿಗೆ ಕಾಲಕ್ರಮಣದಲ್ಲಿ ಪರಿವರ್ತನೆಗೊಳ್ಳುತ್ತದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಬಾಲಾಜಿ ಹೇಳಿದರು.

ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಶ್ರೀಆಂಜನೇಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ ಪಾಂಡವಪುರ ತಾಲೂಕು ಘಟಕದ ಉದ್ಘಾಟನೆಯನ್ನು ಡೊಳ್ಳು ಬಾರಿಸುವ ಮೂಲಕ ನೆರವೇರಿಸಿ ಮಾತನಾಡಿದರು.

ಜಾನಪದವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಜಾನಪದ ಮಾನವೀಯ ಮೌಲ್ಯಗಳು ಹಾಗೂ ಜೀವನದ ಪಾಠ ಒಳಗೊಂಡಿರುತ್ತದೆ. ಸರ್ಕಾರ ಮೂಲ ಜನಪದ ಕಲಾವಿದರ ಮಾಶಾಸನವನ್ನು 2 ಸಾವಿರ ರು.ಗಳಿಂದ

5 ಸಾವಿರ ರು.ಗೆ ಏರಿಸಬೇಕು. ಜೊತೆಗೆ ವಯೋಮಿತಿಯನ್ನು 45ಕ್ಕೆ ಇಳಿಸಬೇಕು. ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಶೇ. 2ರಷ್ಟು ಅನುದಾನವನ್ನು ಜನಪದ ಕಲಾವಿದರಿಗೆ ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.


ರಾಮನಗರ ಜಿಲ್ಲೆ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ ಮಾತನಾಡಿ, ಜಾನಪದ ಪರಿಷತ್ತಿನ ದಶಮಾನೋತ್ಸವ ಸಂದರ್ಭದಲ್ಲಿ ಪಾಂಡವಪುರ ತಾಲೂಕು ಘಟಕ ಉದ್ಘಾಟನೆಯಾಗಿರುವುದು ವಿಶೇಷ. ಮುಂದಿನ ದಿನಗಳಲ್ಲಿ ರಾಮನಗರ ಹಾಗೂ ಮಂಡ್ಯ ಜಿಲ್ಲೆ ಘಟಕಗಳಿಂದ ಜಂಟಿ ಸಮ್ಮೇಳನ ಏರ್ಪಡಿಸಲಾಗುವುದು ಎಂದರು.

ಇದೇ ವೇಳೆ ಕನ್ನಡ ಜಾನಪದ ಪರಿಷತ್ತಿನ ಪಾಂಡವಪುರ ತಾಲೂಕು ಅಧ್ಯಕ್ಷರಾಗಿ ಎಲ್.ಸಿ.ಚಂದ್ರ ಅವರಿಗೆ ಧ್ವಜ ಹಾಗೂ ಪದಪತ್ರ ನೀಡುವ ಮೂಲಕ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಪ್ರದಾನ ಮಾಡಿದರು.

ಜಾನಪದ ಕಲಾವಿದರಾದ ಕೆರೆತಣ್ಣೂರಿನ ಸ್ವಾಮಿಗೌಡ ಹಾಗೂ ಆಕಾಶ್ ತಂಡದವರಿಂದ ಸೋಬಾನೆ ಪದ ಹಾಗೂ ಜಾನಪದಗಳನ್ನು ಹಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷ ವಿಜಯಕೊಪ್ಪ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಹೆಗ್ಗಡಹಳ್ಳಿ ಸೋಬಾನೆ ಕೃಷ್ಣೇಗೌಡ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಲ್.ಬಿ.ಕೆಂಪೇಗೌಡ, ಪರಿಷತ್ ನ ಪತ್ರಿಕಾ ಕಾರ್ಯದರ್ಶಿ ಎನ್.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಶಿವಣ್ಣಗೌಡ, ಜಂಟಿ ಕಾರ್ಯದರ್ಶಿ ಅಖಿಲೇಶ್, ಖಜಾಂಚಿ ಬೇವಿನಕುಪ್ಪೆ ಭಾರತಿಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ್, ಎಲ್.ಬಿ.ಕೆಂಪೇಗೌಡ, ಸಂಚಾಲಕ ಎಸ್.ಆಕಾಶ್, ಸಹ ಸಂಚಾಲಕಿ ಎಚ್.ಸಿ.ದಾಕ್ಷಾಯಿಣಿ, ಸದಸ್ಯರಾದ ಕೆರೆತೊಣ್ಣೂರು ಸ್ವಾಮಿಗೌಡ, ಹೆಗ್ಗಡಹಳ್ಳಿ ಕೃಷ್ಣೇಗೌಡ, ಪುಟ್ಟಸ್ವಾಮಿಗೌಡ, ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.