ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ‘7ನೇ ತಾಲೂಕು ಜಾನಪದ ಸಮ್ಮೇಳನ’
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಾನಪದ ಕಲೆ ಬಗ್ಗೆ ಯುವ ಪೀಳಿಗೆಗೆ ಆಸಕ್ತಿ ಮೂಡಿಸಲು ಶಾಲಾ ಪಠ್ಯದಲ್ಲಿ ಜಾನಪದ ವಿಷಯಗಳನ್ನು ಅಳವಡಿಸಬೇಕೆಂದು ಮಾಜಿ ಶಾಸಕ ಎಸ್.ಎಂ.ನಾಗರಾಜ್ ಹೇಳಿದರು.
ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಭಾನುವಾರ ‘7ನೇ ತಾಲೂಕು ಜಾನಪದ ಸಮ್ಮೇಳನ’ ಅದ್ಧೂರಿಯಾಗಿ ನಡೆಯಿತು. ಸಮ್ಮೇಳನದ ಅಧ್ಯಕ್ಷ ಟಿ.ಸಿ.ಚಂದ್ರಪ್ರಕಾಶ್ ಹಾಗೂ ನಿವೃತ್ತ ಸೈನಿಕ ಮಲ್ಲಿಕಾರ್ಜುನ್ ಅವರನ್ನು ಎತ್ತಿನಗಾಡಿಯಲ್ಲಿ ಕರೆತರಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳಾದ ಕೋಲಾಟ, ವೀರಗಾಸೆ, ಸುಗ್ಗಿ ಕುಣಿತ, ಡೊಳ್ಳು ಕುಣಿತದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್.ಎಂ.ನಾಗರಾಜು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಜನಪದ ಕಲೆ ಸಾಹಿತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು. ಪಠ್ಯದಲ್ಲಿ ಜಾನಪದಕ್ಕೆ ಸಂಬಂಧಿಸಿದ ವಿಷಯ ಮುದ್ರಿಸಿ ಆಕರ್ಷಣೀಯವಾಗಿ ಭೋದಿಸಬೇಕಾಗಿದೆ. ಇದರಿಂದ ಮಕ್ಕಳಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡಿಸಬಹುದು ಎಂದು ಅಭಿಪ್ರಾಯಪಟ್ಟರು.ಸಮ್ಮೇಳನದ ಸರ್ವಾಧ್ಯಕ್ಷ ಟಿ.ಸಿ. ಚಂದ್ರಪ್ರಕಾಶ್ ಮಾತನಾಡಿ, ಸುಮಾರು 40 ವರ್ಷಗಳಿಂದ ಜಾನಪದ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಗೆ ಸಕ್ರಿಯ ಸೇವೆ ಸಲ್ಲಿಸುತ್ತಿದ್ದೇನೆ. ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ಹೆಮ್ಮೆ ತಂದಿದೆ. ಸೇವೆಗೆ ಸಲ್ಲಿಸಿದ ಗೌರವ ಇದಾಗಿದೆ. ಇನ್ನು ಹೆಚ್ಚು ಸೇವೆ ಮಾಡಲು ಸ್ಪೂರ್ತಿ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಲಾ ಸೇವೆ ಮಾಡುತ್ತೇನೆ ಎಂದರು.
ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಸಾಹಿತಿ ಶ್ರೀನಾಥ್, ಸಮ್ಮೇಳನಗಳಿಂದ ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳಿಗೆ ಮರು ಜೀವ ಕೊಟ್ಟು ಯುವಕ ಯುವತಿಯರಿಗೆ ಜಾನಪದ ಕಲೆಗಳ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆ ದೊರಕಿಸಿಕೊಡಬೇಕಿದೆ. ಯುವಕ ಯುವತಿಯರು ಪಾಶ್ಚತ್ಯ ಸಂಸ್ಕೃತಿಗೆ ಮರುಳಾಗದೆ ಭಾರತೀಯ ಸಂಸ್ಕೃತಿ ಮೂಲ ಬೇರಾದ ಜಾನಪದ ಸಾಹಿತ್ಯ ಸಂಗೀತ ಕಲೆ ಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಜಿಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಜಾನಪದ ಕಲಾವಿದೆ ಲಕ್ಷ್ಮೀದೇವಮ್ಮ, ಸಾಹಿತಿ ಡಿ.ಪಿ.ರಾಜಪ್ಪ, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ಗಡಿಹಳ್ಳಿ ಮಂಜಣ್ಣ, ಗೌರವಾಧ್ಯಕ್ಷ ಮರಳು ಸಿದ್ದಪ್ಪ, ದಂಡೂರು ರಾಜಣ್ಣ, ಜಾಗದಕಟ್ಟೆ ಜಯಣ್ಣ ತ್ಯಾಗದಕಟ್ಟೆ ತಿಪ್ಪೇಶ್ ಗೊಂಡೆದಹಳ್ಳಿ ತಿಪ್ಪೇಶ, ಚಿಕ್ಕಲೂರು ಜಯಣ್ಣ, ಶಂಕ್ರಪ್ಪ, ಶಂಕ್ರಪ್ಪ ಕಾರೆಹಳ್ಳಿ ಬಸಪ್ಪ ಮೊದಲಾದವರಿದ್ದರು.- ಕೋಟ್-
ಹಿರಿಯರು ಜಾನಪದ ಕಲೆ ಸಾಹಿತ್ಯ ಸಂಗೀತದ ಬಗ್ಗೆ ಮಕ್ಕಳಿಗೆ ಅರಿವನ್ನು ಮೂಡಿಸಬೇಕಾಗಿದೆ. ಈ ಜಾನಪದ ಸಂಸ್ಕೃತಿಯಿಂದ ಮಕ್ಕಳಿಗೆ ನೈತಿಕತೆ ಕಲಿಸಬಹುದು. ಜಾನಪದಕ್ಕೆ ಜಾತಿ ಧರ್ಮದ ಕಟ್ಟುಪಾಡುಗಳಿಲ್ಲ. ಎಲ್ಲರಲ್ಲೂ ಧಾರ್ಮಿಕ ಸಹಿಷ್ಣತೆ ಮೂಡಿಸಿ ಸಮಾಜದ ಮುಖ್ಯ ವಾಹಿನಿಗೆ ಕರೆದುಕೊಂಡು ಹೋಗುತ್ತದೆ.- ಮಲ್ಲಿಕಾರ್ಜುನ್, ನಿವೃತ್ತ ಸೈನಿಕ