ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಿದರೆ ಸಾಲದು ಅವರ ತತ್ವ ಮತ್ತು ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್ ಹೇಳಿದರು.ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಸಮುದಾಯ ಭವನಕ್ಕೆ ಜಾಗವಿದ್ದು ಅನುದಾನ ಇಲ್ಲ ಎಂದು ತಿಳಿಸಿದ್ದು, ಮುಂದಿನ ಬಜೆಟ್‌ನಲ್ಲಿ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಹೇಳಿದರು.
ಹಿಂದೆ ತಮ್ಮ ಸಮುದಾಯದವರು ಮಾಡುತ್ತಿದ್ದ ಕೆಲಸ ಇಂದಿನ ಮಕ್ಕಳಿಗೆ ಮಾಡಲು ಆಗುವುದಿಲ್ಲ. ಏಕೆಂದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.ಇಂದು ಸರ್ಕಾರದಿಂದ ಬಹಳಷ್ಟು ಸೌಲಭ್ಯಗಳಿವೆ. ನಗರದ ಅಭಿವೃದ್ಧಿಗಾಗಿ 100 ಕೋಟಿ ಅನುದಾನದಿಂದ ರಸ್ತೆ, ವಿದ್ಯುತ್ ದೀಪ, ಚರಂಡಿ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಬಸವಣ್ಣನವರ 770 ಅಮರಂಗಣಗಳಲ್ಲಿ ನಿಜ ಶರಣ ಅಂಬಿಗರು ಒಬ್ಬರಾಗಿದ್ದರು. ಬಸವಣ್ಣನವರಿಗೆ ಆತ್ಮೀಯ ಶರಣರಾಗಿದ್ದರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ನಂಬಿದ್ದ ಅವರು ಕಾಯಕ ಮಾಡುವವರಿಗೆ ತಮ್ಮ ಅನುಭವ ಮಂಟಪದಲ್ಲಿ ಸ್ಥಾನ ನೀಡಿದ್ದರು ಎಂದರು.ನಿಜ ಶರಣ ಅಂಬಿಗರ ಚೌಡಯ್ಯನವರ ಕುರಿತು ಕಲಬುರಗಿ ಜಿಲ್ಲೆಯ ಕಾಳಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಬಿ.ಆರ್. ಅಣ್ಣಾಸಾಗರ ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಸ್ಕೇಟಿಂಗ್‌ನಲ್ಲಿ ರಾಷ್ಟ್ರಮಟ್ಟದವರೆಗೆ ಹೆಸರು ಮಾಡಿದ ಕೃಷ್ಣವಿ ಜಾಧವ್ ಹಾಗೂ ಸಾಹ್ನವಿ ಜಾಧವ್ ಅವರಿಗೆ ಗಣ್ಯರು ಸನ್ಮಾನಿಸಿದರು ಮತ್ತು ಟೋಕರೆ ಕೋಲಿ ಸಮಾಜದ ನೌಕರ ಸಂಘದಿಂದ ಹೊಸ ವರ್ಷದ ದೀನ ದರ್ಶಿಕೆ ಬಿಡುಗಡೆಗೊಳಿಸಲಾಯಿತು.ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಸಿದ್ರಾಮ ಸಿಂಧೆ, ಜಿಲ್ಲಾ ಟೋಕರೆ ಕೋಲಿ ಸಮಾಜದ ಅಧ್ಯಕ್ಷ ಜಗನ್ನಾಥ ಜಮಾದಾರ, ಅಂಬಿಗರ ಯುವ ಸೇನೆ ಅಧ್ಯಕ್ಷ ಸುನಿಲ್ ಭಾವಿಕಟ್ಟಿ, ವೈಜನಾಥ ಹೆಡಗಾಪೂರ, ಸುನಿಲ್ ಕಾಶಂಪೂರ, ಧನರಾಜ ಹಂಗರಗಿ, ಅಶೋಕ ವಕ್ರಾಣಿ, ಮಾರುತಿ ಮಾಸ್ಟರ್ ಹಾಗೂ ಅಂಬಿಗರ ಚೌಡಯ್ಯ ಸಮಾಜ ಭಾಂಧವರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.