ಚುನಾವಣಾ ಆಯೋಗದ ನಿರ್ದೇಶನ ತಪ್ಪದೇ ಪಾಲಿಸಿ: ರಾಜೀವ್ ರತನ್‌

| Published : Apr 24 2024, 02:19 AM IST

ಸಾರಾಂಶ

ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಪಾರದರ್ಶಕತೆಯಿಂದ ಕೂಡಿರುವಂತೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಚುನಾವಣಾ ವೀಕ್ಷಕ ರಾಜೀವ್ ರತನ್ ನಿರ್ದೇಶನ ನೀಡಿದರು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಚುನಾವಣಾ ಆಯೋಗ ನೀಡಿರುವ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲ ಸಹಾಯಕ ಚುನಾವಣಾಧಿಕಾರಿಗಳಿಗೆ ಮತ್ತು ವಿವಿಧ ನೋಡೆಲ್ ಅಧಿಕಾರಿಗಳಿಗೆ ಚುನಾವಣಾ ವೀಕ್ಷಕ ರಾಜೀವ್ ರತನ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,

ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತಂತೆ ಅತ್ಯಂತ ಸ್ಪಷ್ಟವಾಗಿ ಮತ್ತು ವಿವರವಾಗಿ ತಿಳಿಸಿದ್ದು, ಎಲ್ಲ ಅಧಿಕಾರಿಗಳು ತಮ್ಮ ಕರ್ತವ್ಯಗಳ ಬಗ್ಗೆ ತಮಗೆ ನೀಡಿರುವ ಕೈಪಿಡಿಯನ್ನು ಅಧ್ಯಯನ ಮಾಡಿ, ಅದರಂತೆಯೇ ಕಾರ್ಯನಿರ್ವಹಿಸಬೇಕು. ಚುನಾವಣಾ ಸಂದರ್ಭದಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ನೇರವಾಗಿ ತನ್ನನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಸುಗಮ ಚುನಾವಣೆಗಾಗಿ ರಚಿಸಲಾಗಿರುವ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳಿಂದ ಇದುವರೆಗೆ ನಿರ್ವಹಿಸಿರುವ ಕರ್ತವ್ಯಗಳ ಕುರಿತಂತೆ ಮಾಹಿತಿ ಪಡೆದ ಅವರು, ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಪಾರದರ್ಶಕತೆಯಿಂದ ಕೂಡಿರುವಂತೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ ಮಾತನಾಡಿ, ಚುನಾವಣಾ ಕಣದಲ್ಲಿರುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಂದ ಯಾವುದೇ ದೂರುಗಳು ಸ್ವೀಕೃತವಾಗದಂತೆ ಎಲ್ಲ ಆಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸುವುದರ ಮೂಲಕ ಜಿಲ್ಲೆಯಲ್ಲಿ ಸುಗಮ ರೀತಿಯಲ್ಲಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಸ್ವೀಪ್ ನೋಡಲ್ ಅಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪವಿಭಾಗಾಧಿಕಾರಿ ಕನಿಷ್ಕ ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಇದ್ದರು.