ತಲೆಗೆ ಪೆಟ್ಟಾಗಲು ಹಲವಾರು ಕಾರಣಗಳಿದ್ದರೂ ಅವುಗಳಲ್ಲಿ ವಾಹನ ಅಪಘಾತಗಳೇ ಮೊದಲ ಸ್ಥಾನದಲ್ಲಿವೆ. ವರದಿಯ ಪ್ರಕಾರ ಭಾರತದಲ್ಲಿ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಶೇ. 60ರಷ್ಟು ವಾಹನ ಅಪಘಾತಕ್ಕೆ ತುತ್ತಾಗುತ್ತಿದ್ದಾರೆಂದು ನರರೋಗ ತಜ್ಞ ಡಾ. ಕ್ರಾಂತಿಕಿರಣ ತಿಳಿಸಿದ್ದಾರೆ.
ಹುಬ್ಬಳ್ಳಿ:
ಬೈಕ್ ಚಲಾಯಿಸುವಾಗ ಹೆಲ್ಮೆಟ್, ಕಾರು ಓಡಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಕೇವಲ ನಿಯಮ ಪಾಲನೆಗಾಗಿ ಮಾತ್ರವಲ್ಲ. ನಿಮಗಾಗಿ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಎಂಬುದನ್ನು ಯುವಕರು ಮರೆಯಬಾರದು ಎಂದು ಬಾಲಾಜಿ ಆಸ್ಪತ್ರೆ ಚೇರ್‌ಮನ್ ಮತ್ತು ನರರೋಗ ತಜ್ಞ ಡಾ. ಕ್ರಾಂತಿಕಿರಣ ತಿಳಿಸಿದರು.ಇಲ್ಲಿನ ಕನಕದಾಸ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಬಾಲಾಜಿ ಆಸ್ಪತ್ರೆ ವತಿಯಿಂದ "ವಿಶ್ವ ತಲೆ ಗಾಯ ಜಾಗೃತಿ ದಿನ " ಅಂಗವಾಗಿ ಗುರುವಾರ ಆರೋಗ್ಯ ಅರಿವು ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಲೆಗೆ ಪೆಟ್ಟಾಗಲು ಹಲವಾರು ಕಾರಣಗಳಿದ್ದರೂ ಅವುಗಳಲ್ಲಿ ವಾಹನ ಅಪಘಾತಗಳೇ ಮೊದಲ ಸ್ಥಾನದಲ್ಲಿವೆ. ವರದಿಯ ಪ್ರಕಾರ ಭಾರತದಲ್ಲಿ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಶೇ. 60ರಷ್ಟು ವಾಹನ ಅಪಘಾತಕ್ಕೆ ತುತ್ತಾದರೆ, ಶೇ. 20ರಿಂದ 30ರಷ್ಟು ಅನ್ಯ ಕಾರಣಗಳಿಂದ ಬಿದ್ದು ಮತ್ತು ಶೇ.10-20 ಹಲ್ಲೆ ಅಥವಾ ಆಟ ಆಡುವಾಗ ಸಂಭವಿಸುವ ಅಪಘಾತಗಳಿಂದ ತಲೆಗೆ ಪೆಟ್ಟು ಮಾಡಿಕೊಳ್ಳುತ್ತಾರೆ. ಇಂಡಿಯನ್ ಹೆಡ್ ಇಂಜುರಿ ಫೌಂಡೇಶನ್ ವರದಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 1.5 ಮಿಲಿಯನಷ್ಟು ಮೆದುಳಿನ ಗಾಯದ ವರದಿ ದಾಖಲಾಗುತ್ತಿದ್ದು, 2 ಲಕ್ಷಕ್ಕೂ ಅಧಿಕ ಸಾವು ಸಂಭವಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಭಾರತದಲ್ಲಿ ರಸ್ತೆ ಅಪಘಾತದಿಂದ ಪ್ರತಿ 6 ನಿಮಿಷಕ್ಕೆ ಒಂದರಂತೆ ಸಾವು ಸಂಭವಿಸುತ್ತಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಸಾವನ್ನಪ್ಪುತ್ತಿರುವವರ ಪ್ರಮಾಣ ಭಾರತದಲ್ಲೇ ಹೆಚ್ಚಿದೆ. ಆದ್ದರಿಂದ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದರು .
ಕನಕದಾಸ ಶಿಕ್ಷಣ ಸಂಸ್ಥೆಯ ಸಂದೀಪ ಬೂದಿಹಾಳ್ ಮಾತನಾಡಿ, ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ಸಾವು-ನೋವುಗಳ ಪ್ರಮಾಣ ನಿಜಕ್ಕೂ ಆತಂಕ ತರಿಸುತ್ತಿದ್ದು, ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಈ ವೇಳೆ ಪ್ರಾಚಾರ್ಯ ಡಾ. ಬಿ.ಜಿ. ಮಡ್ಲಿ, ಡಾ. ಎನ್.ಡಿ. ಶೇಖ್, ಪ್ರೊ. ಬೀರೇಶ ತಿರುಕಪ್ಪನವರ, ಮಹೇಶ್ ಎಲ್, ಸೇರಿದಂತೆ ಇನ್ನಿತರ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.