ಸಾರಾಂಶ
ಭಗವಾನ್ ಶ್ರೀ ಕೃಷ್ಣನ ಆದರ್ಶ ಗುಣಗಳನ್ನು ಇಂದಿನ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ಒಳ್ಳೆಯ ನ್ಶೆತಿಕತೆ ಹಾಗೂ ಮೂಢನಂಬಿಕೆ ರಹಿತ ಧಾರ್ಮಿಕ ಮನೋಭಾವವನ್ನು ಬೆಳೆಸಬೇಕು ಎಂದು ಡಯಟ್‌ನ ಹಿರಿಯ ಉಪನ್ಯಾಸಕ ಬಾಬು ಹೇಳಿದರು. ರಾಮನಗರದಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಭಗವಾನ್ ಶ್ರೀ ಕೃಷ್ಣನ ಆದರ್ಶ ಗುಣಗಳನ್ನು ಇಂದಿನ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ಒಳ್ಳೆಯ ನ್ಶೆತಿಕತೆ ಹಾಗೂ ಮೂಢನಂಬಿಕೆ ರಹಿತ ಧಾರ್ಮಿಕ ಮನೋಭಾವವನ್ನು ಬೆಳೆಸುವುದು ಇಂದಿನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಬೇಕು ಎಂದು ಡಯಟ್‌ನ ಹಿರಿಯ ಉಪನ್ಯಾಸಕ ಬಾಬು ಹೇಳಿದರು.ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಸೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮದವರಿಗೆ ಪವಿತ್ರ ಗ್ರಂಥವಾದ ಭಗವದ್ಗೀತೆಯು ಶ್ರೀ ಕೃಷ್ಣನಿಂದ ಬೋಧಿಸಲ್ಪಟ್ಟಿದ್ದು, ಇದರಲ್ಲಿರುವ ಮಾನವೀಯ ಮೌಲ್ಯಗಳನ್ನು ಕೇವಲ ಹಿಂದೂ ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲಾ ಜನಾಂಗದವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಇಂದಿನ ಯುವ ಪೀಳಿಗೆ ಮತ್ತು ಮಕ್ಕಳಲ್ಲಿ ನೈತಿಕ ಶಿಕ್ಷಣ ಕೊರತೆಯು ಎದ್ದು ಕಾಣುತ್ತಿದೆ. ಅದನ್ನು ಪೋಷಕರು ಮನೆಗಳಿಂದಲೇ ಮಕ್ಕಳಿಗೆ ಶ್ರೀ ಕೃಷ್ಣರಂತಹ ಆದರ್ಶ ಪುರುಷರ ಉದಾಹರಣೆಯೊಂದಿಗೆ ಕಲಿಸಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, ಇಂದಿನ ಮಕ್ಕಳು ಅತಿ ಹೆಚ್ಚು ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂದು ಹೇಳಿದರು. ಶಿಕ್ಷಣದಿಂದಲೇ ತಮ್ಮ ಅಭಿವೃದ್ಧಿ ಮತ್ತು ಬೆಳವಣಿಗೆ ಸಾಧ್ಯ ಆದ್ದರಿಂದ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಮೊದಲ ಆದ್ಯತೆಯಾಗಬೇಕು ಮತ್ತು ಸರ್ಕಾರದಿಂದ ಬರುವ ಅನೇಕ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿ ಘನತೆಯಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್, ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕ ಜಯಂತ್, ಸಹಾಯಕ ಅಭಿಯಂತರರಾದ ವಿಶ್ವನಾಥ್, ಸಮುದಾಯದ ಮುಖಂಡರುಗಳಾದ ಪಿ.ಸಿ. ನಾಗಪ್ಪ, ಟಿ. ಕೃಷ್ಣ ಯಾದವ್, ಎಂ.ಎನ್ .ಆರ್ . ರಾಜು ,ಮಾದಯ್ಯ, ವೆಂಕಟರಮಣ, ನರಸಿಂಹಯ್ಯ, ನರಸಿಂಹಮೂರ್ತಿ ಉಪಸ್ಥಿತರಿದ್ದರು.