ಸಾರಾಂಶ
ರಾಮನಗರ: ಬೆಂಗಳೂರು ಪ್ರಪಂಚಾದ್ಯಂತ ವ್ಯಾಪಾರ ವಹಿವಾಟಿನಲ್ಲಿ ಇಂದು ಅಗ್ರಸ್ಥಾನದಲ್ಲಿದೆ. ಇದಕ್ಕೆ ಕೆಂಪೇಗೌಡರು ಹಾಕಿದ ಅಡಿಪಾಯ ಕಾರಣ. ಯುವಕರು ಕೆಂಪೇಗೌಡರ ನಾಯಕತ್ವ ಗುಣ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಂದು ಕೆಂಪೇಗೌಡರು ಇಡೀ ಬೆಂಗಳೂರಿನ ಸುತ್ತಮುತ್ತಲು ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು. ಅದೇ ರೀತಿ ನೀವು ನಿಮ್ಮ ಅವಕಾಶಗಳನ್ನು ಕೇವಲ ಜಿಲ್ಲೆಗೆ ಸೀಮಿತಗೊಳಿಸಿಕೊಳ್ಳಬೇಡಿ. ದೇಶಾದ್ಯಂತ ಉದ್ಯೋಗ ನಿರ್ವಹಿಸುವಂತಹ ಮಾನಸಿಕ ಸ್ಥಿತಿಯನ್ನು ರೂಢಿ ಮಾಡಿಕೊಳ್ಳಬೇಕು. ಈ ಸಂದೇಶವನ್ನು ಎಲ್ಲಾ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇಲ್ಲಿ ನೆರೆದಿರುವ ಎಲ್ಲಾ ತಂದೆ ತಾಯಂದಿರಿಗೆ ನಾನು ಮನವಿ ಮಾಡುತ್ತಿದ್ದೇನೆ. ತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ವಿಷಯಗಳಲ್ಲಿ ಕೇವಲ ಜಿಲ್ಲೆಗೆ ಸೀಮಿತಗೊಳಿಸಬೇಡಿ. ದೇಶಾದ್ಯಂತ ಅಪಾರ ಅವಕಾಶಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವಿನಾಶ್ ಕಿವಿಮಾತು ಹೇಳಿದರು.ಜಾನಪದ ವಿದ್ವಾಂಸ ಡಾ. ಬೈರೇಗೌಡ ಮಾತನಾಡಿ, ಕೆಂಪೇಗೌಡರು ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ 16 ಪೇಟೆಗಳನ್ನು ನಿರ್ಮಿಸಿದರು. ಬೆಂಗಳೂರು ಸುತ್ತಮುತ್ತಲು ಸಾವಿರಾರು ಕೆರೆಗಳನ್ನು ನಿರ್ಮಿಸಿದ್ದರು. ಯುವಕರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಿನ ಕಾಲದಲ್ಲೇ ಬೆಂಗಳೂರನ್ನು ಮಾದರಿ ಬೆಂಗಳೂರನ್ನಾಗಿ ನಿರ್ಮಿಸಿದ್ದರು. ಇದಕ್ಕೆ ಅವರು ಬೆಂಗಳೂರಿನ ನಾಲ್ಕು ಮೂಲೆಯಲ್ಲಿ ನಿರ್ಮಿಸಿದ್ದ ಕೋಟೆಗಳೆ ಸಾಕ್ಷಿ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಕಲೆ, ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆಗೆ ಶ್ರೀ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಮಠಾಧಿಕಾರಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್. ಎಚ್ ರಾಮಚಂದ್ರ, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚೇತನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.27ಕೆಆರ್ ಎಂಎನ್ 4,5.ಜೆಪಿಜಿ
4.ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮಾತನಾಡಿದರು.5.ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಜಿಲ್ಲಾಧಿಕಾರಿ ಅವಿನಾಶ್ ಹಾಗೂ ಶ್ರೀ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಮಠಾಧಿಕಾರಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಮಾಲಾರ್ಪಣೆ ಮಾಡಿದರು.