ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ.
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಸಮಾಜ ಸದೃಢತೆ ಹೊಂದಬೇಕಾದರೆ ಗುರುವಿನ ಮಾರ್ಗದರ್ಶನ, ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ ಹಾಗೂ ವಿದ್ಯೆ ಅತಿ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಾಲ್ಮೀಕಿಯವರ ಜೀವನ ಶೈಲಿ, ತತ್ವಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ ಕೆ. ರಾಘವೇಂದ್ರ ರಾವು ಹೇಳಿದರು.ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದ ಆವರಣದಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪರಿವರ್ತನೆ ಜಗದ ನಿಯಮ ಎಂಬಂತೆ ಶೋಷಿತ ವರ್ಗದಲ್ಲಿ ಜನಿಸಿ ಕಾಡಿನಲ್ಲಿ ನೆಲೆಸಿ ದರೋಡೆಯನ್ನು ತನ್ನ ಕಾಯಕ ಮಾಡಿಕೊಂಡಿದ್ದ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಬರೆಯುವ ಮಟ್ಟಿಗೆ ಬದಲಾದ.
ಹೀಗೆ ಬದಲಾವಣೆ ಮನುಷ್ಯನ ಸ್ಥಾನವನ್ನು ಎತ್ತರಕ್ಕೇರಿಸುತ್ತದೆ. ಅವರ ಅನುಯಾಯಿಗಳಾದ ನಾವುಗಳು ಅವರ ತತ್ವ, ಆದರ್ಶಗಳನ್ನು ಹಾಗೂ ಅವರ ವಿಚಾರಗಳನ್ನು ದಿನನಿತ್ಯದ ಜೀವದಲ್ಲಿ ಅಳವಡಿಸಿಕೊಳ್ಳಬೇಕು. ಮಹರ್ಷಿ ವಾಲ್ಮೀಕಿಯವರು ತಮ್ಮ ಜ್ಞಾನ, ತಪಸ್ಸು ಮತ್ತು ಸಾಹಿತ್ಯದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ತ್ಯಾಗ, ಕರ್ತವ್ಯನಿಷ್ಠೆ ಹಾಗೂ ಆದರ್ಶ ಜೀವನದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.ಮಹರ್ಷಿ ವಾಲ್ಮೀಕಿ ಜೀವನವು ಬದಲಾವಣೆ, ಆತ್ಮಪರಿಶೀಲನೆ ಮತ್ತು ಸಾಧನೆಗೆ ಪ್ರೇರಣೆಯಾಗಿದೆ. ಮನುಷ್ಯನು ತನ್ನಲ್ಲಿರುವ ದುರ್ಗುಣಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಾಧ್ಯ. ಅವರ ತತ್ವಾದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿದ್ದು, ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಸಣ್ಣವೀರಪ್ಪ ಹಳ್ಳೆಪ್ಪನವರ, ಮಹೇಂದ್ರ ಉಡಚಣ್ಣವರ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಸಂದೇಶಗಳನ್ನು ಜೀವನದಲ್ಲಿ ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ಮಾನವ ಕುಲದಲ್ಲಿ ನೈತಿಕತೆಯ ಜಾಗೃತಿ ಮೂಡಿಸುವ ಜತೆಗೆ ಮನುಷ್ಯ ಬದುಕಿನಲ್ಲಿ ಶ್ರಮಿಸಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಆದಿ ಕವಿ ಮಹರ್ಷಿ ವಾಲ್ಮೀಕಿಯವರು. ಕೆಳವರ್ಗದಲ್ಲಿ ಜನಿಸಿದ್ದರು ಸಹ ತಮ್ಮ ಸಾಧನೆಯಿಂದ ಉತ್ತುಂಗಕ್ಕೇರುವ ಮುಖಾಂತರ ಇತಿಹಾಸದ ಪುಟಗಳಲ್ಲಿ ವಿರಾಜಮಾನರಾಗಿದ್ದಾರೆ. ಈ ಜಗತ್ತಿಗೆ ಅಹಿಂಸೆಯ ಸಂದೇಶ ನೀಡುವ ಮುಖಾಂತರ ಹಾಗೂ ಆದರ್ಶ ಜೀವನದ ರಾಮಾಯಣವನ್ನು ಪರಿಚಯಿಸಿರುವ ಇವರು ಸರ್ವಜನಾಂಗದ ಗುರುವಾಗಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಪಪಂ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ, ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಸಮಾಜದ ತಾಲೂಕು ಅಧ್ಯಕ್ಷ ಮುತ್ತು ಕುದರಿಮೋತಿ, ಬಸಣ್ಣ ನಾಯ್ಕರ, ಯಲ್ಲಪ್ಪ ಬಂಗಾರಿ, ಅಜ್ಜುಗೌಡ್ರ ಪಾಟೀಲ, ಉಮೇಶ ತೇಲಿ, ಫಕ್ಕೀರೇಶ ತಳವಾರ, ಶಿವು ನಾಯಕ, ರುದ್ರಣ್ಣ ಕೆಂಚಕ್ಕನವರ, ಶಿವು ತಳವಾರ, ಮಲ್ಲೇಶ ತಳವಾರ, ಹನಮಂತ ಕೊಡ್ಲಿ, ರಾಘು ತಳವಾರ ಇತರರು ಇದ್ದರು.