ಸಾರಾಂಶ
ರಾಣಿಬೆನ್ನೂರು: ಮಠದ ಪರಂಪರೆ, ಧಾರ್ಮಿಕ ಆಚಾರ, ವಿಚಾರಗಳು ನೆಲೆಯೂರಿರುವ ಕ್ಷೇತ್ರಗಳು ಪಾವಿತ್ರ್ಯತೆಯಿಂದ ಕೂಡಿರುತ್ತವೆ. ಅಂತಹ ಪವಿತ್ರವಾದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿರುವುದಕ್ಕೆ ಐರಣಿ ಹೊಳೆಮಠವೇ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲೂಕಿನ ಐರಣಿ ಹೊಳೆಮಠದಲ್ಲಿ ಶನಿವಾರ ನಡೆದ ಶ್ರೀ ಗುರು ಮುಪ್ಪಿನಾರ್ಯ ಮಹಾತ್ಮಾಜಿ ಅವರ 41ನೇ ವರ್ಷದ ಪುಣ್ಯಾರಾಧನೆ, ಸಾಮೂಹಿಕ ವಿವಾಹ, ತುಲಾಭಾರ, ಅಂಬಾರಿ ಉತ್ಸವ, ರಥೋತ್ಸವ ಕಾರ್ಯಕ್ರಮಗಳ ಧರ್ಮಸಭೆಯ ಉದ್ಘಾಟಿಸಿ ಅವರು ಮಾತನಾಡಿದರು. ಐರಣಿ ಹೊಳೆಮಠವು ಬಸವರಾಜ ದೇಶೀಕೇಂದ್ರಮಹಾಸ್ವಾಮಿಗಳ ಶಕ್ತಿಯಿಂದ ಮಠವು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ. ಇಂತಹ ಮಠಕ್ಕೆ ಬರುವ ಭಕ್ತರೆಲ್ಲರೂ ಗುರುವಿನ ಮಾರ್ಗದಲ್ಲಿ ಮುನ್ನಡೆಯಬೇಕು, ಅಂದಾಗ ನಿಮ್ಮ ಜೀವನ ಪಾವನವಾಗುವುದು ಎಂದರು.ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪ್ರಾಣಿ ಪಕ್ಷಿಗಳಿಗೆ ಇರುವ ಸೌಜನ್ಯ ಮನುಷ್ಯನಿಗೆ ಇಲ್ಲದಂತಾಗಿದೆ. ಯಾರೂ ಧರ್ಮದ ತಳಹದಿಯಲ್ಲಿ ಬದುಕುತ್ತಾರೋ ಅವರು ನೆಮ್ಮದಿಯಿಂದ ಇರಲು ಸಾಧ್ಯ. ಸಿದ್ಧಾರೂಢರ ಪರಂಪರೆ ಅರ್ಥೈಸಿಕೊಂಡು ಭಕ್ತಿಯ ಮಾರ್ಗದಲ್ಲಿ ಎಲ್ಲರೂ ಮುನ್ನಡೆದು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಹಿಪ್ಪರಗಿಯ ಶ್ರೀ ಸಿದ್ಧಾರೂಢ ಶರಣರು ಮಾತನಾಡಿ, ಶ್ರೀ ಸಿದ್ಧಾರೂಢರ ಹಾಗೂ ಮುಪ್ಪಿನಾರ್ಯರು ಸೇರಿದಂತೆ ಸಾಧು ಸಂತರ ಶರಣರ ಜೀವನ ಚರಿತ್ರೆಯನ್ನು ತಿಳಿಯಬೇಕು. ಜತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ನಿಮ್ಮ ಜೀವನ ಪಾವನವಾಗಲು ಸಾಧ್ಯ. ಸಿದ್ಧಾರೂಢರ ಹಲವಾರು ಪವಾಡಗಳು ಇವೆ. ಅವುಗಳನ್ನು ಅವರ ಪುರಾಣ ಕಥೆಗಳಲ್ಲಿ ಓದಿ ತಿಳಿದುಕೊಳ್ಳಬೇಕು. ಗುರುವಿನ ಮಾರ್ಗದಲ್ಲಿ ಮುನ್ನಡೆದು ಸನ್ಮಾರ್ಗದ ಬದುಕು ಕಟ್ಟಿಕೊಳ್ಳಬೇಕು. ಅಹಂಕಾರ ತೊರೆದು ಭಕ್ತಿಯ ಮಾರ್ಗದಲ್ಲಿ ಸಾಗಬೇಕು. ಅಂದಾಗ ನಿಮ್ಮ ಜೀವನ ಸುಂದರವಾಗಿರಲು ಸಾಧ್ಯ ಎಂದರು.ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಮಹಾತ್ಮಾಜೀ ಅವರು ಹಾಗೂ ನೂತನ ಪಟ್ಟಾಧಿಪತಿ ಶ್ರೀ ಸಿದ್ಧಾರೂಢ ಭಾರತಿ ಸ್ವಾಮಿಗಳು ಆಶೀರ್ವಚನ ನೀಡಿದರು.
ಕುಳ್ಳೂರಿನ ಬಸವಾನಂದ ಭಾರತಿ ಶ್ರೀಗಳು, ಜೋಡಕುರಳಿಯ ಚಿದ್ಘನಾನಂದ ಭಾರತಿ ಶ್ರೀಗಳು, ಗದಗಿನ ಅಸುಂಡಿ ನೀಲಮ್ಮ ತಾಯಿಯವರು, ತೆಲಗಿಯ ಪೂರ್ಣಾನಂದ ಶ್ರೀಗಳು ಹಾಗೂ ವಿವಿಧ ಮಠಾಧೀಶರು ನೇತೃತ್ವ ವಹಿಸಿದ್ದರು.ಬಾಬಣ್ಣ ಶೆಟ್ಟರ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಸಿದ್ದು ಚಿಕ್ಕಬಿದರಿ, ಚಂದ್ರಣ್ಣ ಬೇಡರ, ರಾಜಣ್ಣ ಮೋಟಗಿ, ಬಸವರಾಜ ಪಾಟೀಲ, ಬಸವರಾಜ ಪಟ್ಟಣಶೆಟ್ಟಿ, ಉಮೇಶ ಗುಂಡಗಟ್ಟಿ, ಶಿವಪ್ಪ ಗುರಿಕಾರ ಉಪಸ್ಥಿತರಿದ್ದರು.