ವಾಲ್ಮೀಕಿಯವರ ತತ್ವ, ಆದರ್ಶ, ಚಿಂತನೆಗಳನ್ನು ಪಾಲಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

| Published : Oct 08 2025, 01:00 AM IST

ವಾಲ್ಮೀಕಿಯವರ ತತ್ವ, ಆದರ್ಶ, ಚಿಂತನೆಗಳನ್ನು ಪಾಲಿಸಿ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಸಾಮಾನ್ಯರಾಗಿ ಜನಿಸಿ ಅಸಾಮಾನ್ಯ ಸಾಧನೆ ಮಾಡಿದವರು. ಅವರು ರಚಿಸಿರುವ ಬೃಹತ್ ವಾಲ್ಮೀಕಿ ರಾಮಾಯಣ ಗ್ರಂಥ ಇಂದಿಗೂ ಎಲ್ಲರ ಮನೆ ಹಾಗೂ ಮನಗಳಲ್ಲಿ ಚಿರಪರಿಚಿತ. ಶ್ಲೋಕ ಮತ್ತು ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಜೀವನದ ಮೌಲ್ಯ ಮತ್ತು ಮಾನವೀಯತೆ ಜಗತ್ತಿಗೆ ಸಾರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತದ ಸಂಸ್ಕೃತಿಯನ್ನು ಉಳಿಸಿ ಬಹು ಎತ್ತರಕ್ಕೆ ಕೊಂಡೊಯ್ದ ಮಹರ್ಷಿ ವಾಲ್ಮೀಕಿಯವರು ಜಗತ್ತು ಕಂಡ ಮಹಾನ್ ಚೇತನ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.

ನಗರದ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಕೇವಲ ಒಂದು ಸಮುದಾಯದವರಿಗೆ ಸೀಮಿತವಲ್ಲ. ಅವರ ತತ್ವ, ಆದರ್ಶ, ಚಿಂತನೆ ಪ್ರತಿಯೊಬ್ಬರು ಪಾಲಿಸಬೇಕು ಎಂದರು. ವಾಲ್ಮೀಕಿ ಸಾಮಾನ್ಯರಾಗಿ ಜನಿಸಿ ಅಸಾಮಾನ್ಯ ಸಾಧನೆ ಮಾಡಿದವರು. ಅವರು ರಚಿಸಿರುವ ಬೃಹತ್ ವಾಲ್ಮೀಕಿ ರಾಮಾಯಣ ಗ್ರಂಥ ಇಂದಿಗೂ ಎಲ್ಲರ ಮನೆ ಹಾಗೂ ಮನಗಳಲ್ಲಿ ಚಿರಪರಿಚಿತ. ಶ್ಲೋಕ ಮತ್ತು ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಜೀವನದ ಮೌಲ್ಯ ಮತ್ತು ಮಾನವೀಯತೆ ಜಗತ್ತಿಗೆ ಸಾರಿದ್ದಾರೆ ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಅಕ್ಷರ ಜ್ಞಾನವಿದ್ದರೆ ಯಾರು ಯಾವ ಸಾಧನೆ ಬೇಕಾದರೂ ಸಾಧಿಸಬಹುದು. ಸಮಾಜಕ್ಕೆ ಮಾದರಿಯಾಗಿ ಎಂದಿಗೂ ಅಳಿಯದ ಹೆಸರಾಗಿ ಉಳಿಯಬಹುದು ಎಂಬುವುದಕ್ಕೆ ಮಹರ್ಷಿ ವಾಲ್ಮೀಕಿಯವರು ನಿದರ್ಶನ ಎಂದರು.

ಶ್ರೀರಂಗಪಟ್ಟಣದ ವಿದ್ಯಾಭಾರತಿ ಶಾಲೆ ದೈಹಿಕ ಶಿಕ್ಷಕ ಎಂ.ಆರ್.ಉಮೇಶ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಸೇರಿದಂತೆ ದೇಶದ ಮಹಾನ್ ವ್ಯಕ್ತಿಗಳನ್ನು ಕೇವಲ ಒಂದು ಜನಾಂಗ ಮತ್ತು ಸಮುದಾಯಕ್ಕೆ ಸೀಮಿತ ಪಡಿಸಬಾರದು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ದುಡಿದ ಸಾಧಕರನ್ನು ಮತ್ತು ಅಥಿತಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಶ್ರೀನಿವಾಸ್, ನಗರಸಭೆ ಸದಸ್ಯರಾದ ಶ್ರೀಧರ್, ಹರೀಶ್, ಶಿವಲಿಂಗು, ಡಿ. ದೇವರಾಜು ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ಸಮುದಾಯ ಮುಖಂಡರಾದ ಚಂದ್ರನಾಯಕ್, ವೆಂಕಟೇಶ್ ನಾಯಕ್ ಹಲವರು ಇದ್ದರು.ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶ್ರೀಮಹರ್ಷಿ ವಾಲ್ಮೀಕಿಯವರ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಭವ್ಯ ರಥದೊಂದಿಗೆ ಡೊಳ್ಳು, ಕಂಸಾಳೆ, ಪೂಜೆ ಕುಣಿತ ಮತ್ತು ವೀರಗಾಸೆ ಮೂಲಕ ಕಲಾಮಂದಿರದವರೆಗೆ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಧಿಕಾರಿಗಳಾದ ಕೆ.ಶ್ರೀನಿವಾಸ್, ಕಾವ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಇದ್ದರು.7ಕೆಎಂಎನ್ ಡಿ20 ಮಂಡ್ಯ ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು.