ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯಲ್ಲಿ ಇತ್ತೀಚಿಗೆ ರಸ್ತೆ ಅಪಘಾತದ ಪ್ರಕರಣಗಳು ಹೆಚ್ಚುತ್ತಿವೆ. ಅಪಘಾತದಲ್ಲಿ ಮರಣ ಹಾಗೂ ತೀವ್ರತರದ ಹಾನಿಗೊಳಗಾದ ಕುಟುಂಬ ವರ್ಗದವರು ಸಂಕಷ್ಟ ಅನುಭವಿಸುವುದನ್ನು ನಾವು ಕಾಣುತ್ತಿದ್ದೇವೆ. ರಸ್ತೆ ಸುರಕ್ಷತಾ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ರಸ್ತೆ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.ಜಿಲ್ಲಾಡಳಿತ, ಸಾರಿಗೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಕನ್ನಡ ಸಾಹಿತ್ಯ ಭವದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2024ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅತಿವೇಗ, ಓವರ್ ಟೇಕ್ ಹಾಗೂ ನಿರ್ವಹಣೆ ಕೊರತೆಯಿಂದ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಬಹುದು. ಚಾಲನೆ ಮಾಡುವಾಗ ಸ್ವಯಂ-ಶಿಸ್ತು ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಹನಗಳನ್ನು ಚಲಾಯಿಸಿದರೆ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.ಇತ್ತೀಚಿಗೆ ಜಿಲ್ಲೆಯ ಗ್ರಾಮೀಣ ಹಾಗೂ ನಗರದಲ್ಲಿ ಸುಮಾರು 1064 ಅಪಘಾತ ಪ್ರಕರಣಗಳು ಕಂಡು ಬಂದಿವೆ. ಯಾವುದೇ ಸುರಕ್ಷತೆ ಇಲ್ಲದೇ ಜೀವದ ಹಂಗು ತೊರೆದು ವಾಹನಗಳನ್ನು ಚಲಾಯಿಸಬಾರದು. ಶಾಲಾ ವಾಹನಗಳು, ಆಟೋರಿಕ್ಷಾ ಹಾಗೂ ಬಸ್ ಗಳಲ್ಲಿ ಹೆಚ್ಚು ಜನರನ್ನು ತುಂಬಿಕೊಂಡು ಹೋಗುತ್ತಿರುವುದು ಕಂಡುಬರುತ್ತಿವೆ. ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ವಾಹನ ಚಲಾಯಿಸುವುದು ಕೂಡ ಕೆಲವೊಮ್ಮೆ ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು. ಅಪಘಾತ ಪ್ರಕರಣಗಳು ಆಗಿರುವ ಸ್ಥಳಗಳನ್ನು ಗುರುತಿಸಿ ರಸ್ತೆಗಳನ್ನು ಸುಧಾರಣೆಗೆ ತರಲಾಗುವುದು. ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರಿಗೆ ಇಲಾಖೆಯಿಂದ ಇನ್ನೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು.ರಸ್ತೆ ಅಪಘಾತಗಳಿಂದ ಉಂಟಾಗುವ ಸಾವು ಮತ್ತು ಗಾಯಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಜಾಗೃತಿ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡಿ, ನಿಮ್ಮ ಕುಟುಂಬಗಳಿಗಾಗಿ ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯಾಬ್ಬರೂ ಪಾಲಿಸಬೇಕು. ಹೆಲ್ಮೆಟ್, ಸಿಟ್ ಬೆಲ್ಟ್ ಧರಿಸಿ ನಿಯಮಗಳನ್ನು ಪಾಲಿಸುವುದರ ಮೂಲಕ ಜೀವ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಟ್ರ್ಯಾಕ್ಟರ್, ಲಾರಿ, ಬಸ್ ಸೇರಿದಂತೆ ಸಾಕಷ್ಟು ರಸ್ತೆ ಅಪಘಾತ ಪ್ರಕರಣಗಳನ್ನು ನಾವು ನೋಡಿದ್ದೇವೆ. ಅದರಲ್ಲಿ ಬಹುಪಾಲು ಪ್ರಕರಣಗಳನ್ನು ರಸ್ತೆ ಸುರಕ್ಷತೆ ನಿಯಮಗಳನ್ನು ಉಲ್ಲಂಘನೆಗೆ ಮಾಡುವುದರ ಮೂಲಕ ಆಗಿರುತ್ತವೆ. ಆದ್ದರಿಂದ ಪ್ರತಿಯಾಬ್ಬರು ಈ ಕುರಿತು ಜಾಗೃತಿ ವಹಿಸಿ ಸುರಕ್ಷತೆಯಿಂದ ವಾಹನ ಚಲಾಯಿಸಬೇಕು ಎಂದು ಡಾ. ಭೀಮಾಶಂಕರ ಗುಳೇದ ಅವರು ಸಲಹೆ ನೀಡಿದರು.
ಜಾಗೃತಿ ಚಿತ್ರಕಲೆ ಪ್ರದರ್ಶನ:ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಕುರಿತು ಚಿತ್ರಿಸಿದ ಜಾಗೃತಿ ಮೂಡಿಸುವ ಚಿತ್ರಕಲೆಗಳನ್ನು ಪ್ರದರ್ಶಿಸಿದರು.
ಬೆಳಗಾವಿ ವಿಭಾಗದ ಸಾರಿಗೆ ಜಂಟಿ ಆಯುಕ್ತೆ ಎಂ.ಪಿ ಓಂಕಾರೇಶ್ವರಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ನಾಗೇಶ್ ಮುಂಡಾಸ, ಪತ್ರಕರ್ತ ಮಹೇಶ ವಿಜಾಪುರ, ಬೆಳಗಾವಿ ಸಿಟಿಇ ಕಾಲೇಜು ಪ್ರಾಚಾರ್ಯ ಎಂ.ಎಂ ಸಿಂಧೂರ, ಸಾರಿಗೆ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ವಿವಿಧ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು, ವಿದ್ಯಾರ್ಥಿಗಳು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.--
ಬಾಕ್ಸ್ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ; ಜಾಗೃತಿ ಜಾಥಾ
ಇದಕ್ಕೂ ಮುಂಚೆ ಆರ್.ಟಿ.ಓ ವೃತ್ತದಲ್ಲಿ ನಿವೃತ್ತ ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ಅವರು ದ್ವಿಚಕ್ರ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು.ಆರ್.ಟಿ.ಓ ವೃತ್ತದಿಂದ ಪ್ರಾರಂಭವಾದ ಜಾಥಾ ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಕೊಲ್ಲಾಪುರ ಸರ್ಕಲ್ ವರೆಗೆ ಸಂಚರಿಸಿ ಬಳಿಕ ಮತ್ತೆ ರಾಣಿ ಚನ್ನಮ್ಮ ವೃತ್ತದವರೆಗೆ ಬಂದು ಸಮಾರೋಪಾಗೊಂಡಿತು. ಜಾಥಾದಲ್ಲಿ ವಿದ್ಯಾರ್ಥಿಗಳಿಂದ ಸಾರಿಗೆ ನಿಯಮಗಳ ಕುರಿತು ಜಾಗೃತಿ ಫಲಕಗಳನ್ನು ಪ್ರದರ್ಶಿಸಲಾಯಿತು. ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿವಿಧ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
----ಕೋಟ್
ವರದಿಯ ಪ್ರಕಾರ ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಗಳು ಹೆಚ್ಚುತ್ತಿವೆ. ಅಪಘಾತಗಳಲ್ಲಿ ಮೃತರಾದವರ ಸಂಖ್ಯೆಗಳಲ್ಲಿ ಹೆಲ್ಮೆಟ್ ಧರಿಸದೆ ಮೃತರಾದವರ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.-ಭೀಮಾಶಂಕರ ಗುಳೇದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ