ಅತಿ ವೇಗ ಅಪಘಾತಕ್ಕೆ ಪ್ರಮುಖ ಕಾರಣ. ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ, ಮೊಬೈಲ್ ಬಳಕೆ ಬೇಡ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಬೇಡಿ. ಬೈಕ್ ಚಲಾಯಿಸುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ತ್ರಿಬ್ಬಲ್ ರೈಡಿಂಗ್ ಮಾಡಲೇಬೇಡಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಂಚಾರ ನಿಯಮ ಪಾಲಿಸಿದರೆ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ಸುರಕ್ಷಿತ ಪ್ರಯಾಣ ಎಲ್ಲಾ ವಾಹನ ಚಾಲಕರ ಗುರಿಯಾಗಿರಬೇಕು ಎಂದು ನಾಗಮಂಗಲ ಪ್ರಾದೇಶಿಕ ಸಾರಿಗೆ ಇಲಾಖೆ ಸಹಾಯಕ ಅಧಿಕಾರಿ ಹೊನ್ನೇಗೌಡ ಕರೆ ನೀಡಿದರು.

ಪಟ್ಟಣದ ಕೃಷ್ಣ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಇಲಾಖೆಯಿಂದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಚಾಲನಾ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

ಪ್ರತಿಯೊಬ್ಬರ ಜೀವಗಳು ಸಮಾಜದ ಆಸ್ತಿ. ವಾಹನ ಚಾಲಕರೂ ತಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆ ಕಡೆಗೂ ಎಚ್ಚರ ವಹಿಸಬೇಕು. ಸಂಚಾರ ನಿಯಮಗಳ ಪಾಲನೆಯಿಂದ ಎಲ್ಲರೂ ಸುರಕ್ಷಿತವಾಗಿ ನಮ್ಮ ನಮ್ಮ ಮನೆಗಳನ್ನು ತಲುಪಬಹುದು ಎಂದರು.

ಅತಿ ವೇಗ ಅಪಘಾತಕ್ಕೆ ಪ್ರಮುಖ ಕಾರಣ. ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ, ಮೊಬೈಲ್ ಬಳಕೆ ಬೇಡ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಬೇಡಿ. ಬೈಕ್ ಚಲಾಯಿಸುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ತ್ರಿಬ್ಬಲ್ ರೈಡಿಂಗ್ ಮಾಡಲೇಬೇಡಿ. ವಾಹನಗಳಿಗೆ ಕಡ್ಡಾಯ ವಿಮೆ, ಕಾರು ಚಾಲನೆ ವೇಳೆ ಸೀಟ್ ಬೆಲ್ಟ್ ಬಳಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ.ಸತೀಶ್, ಮೋಟಾರು ವಾಹನ ನಿರೀಕ್ಷಕಿ ಶಾಬಾಜ್ ಬಾನು, ಆರಕ್ಷಕ ಉಪ ನಿರೀಕ್ಷಕ ಚಂದ್ರಶೇಖರ್, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿದರು.

ಇದೇ ವೇಳೆ ಸಾರಿಗೆ ಇಲಾಖೆ ಹೊರತಂದಿರುವ ಸಂಚಾರ ಸುರಕ್ಷತಾ ಭಿತ್ತಿಪತ್ರಗಳನ್ನು ಅತಿಥಿಗಳು ಪ್ರದರ್ಶಿಸಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು.