ಜೀವ ರಕ್ಷಣೆ‌ಗೆ ಸಂಚಾರ ನಿಯಮ‌ ಪಾಲಿಸಿ‌

| Published : Mar 13 2024, 02:02 AM IST

ಸಾರಾಂಶ

ಅಪಘಾತ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಾರಿಯಾದ ಕಾನೂನುಗಳ ತಿಳಿವಳಿಕೆ ಎಲ್ಲರಲ್ಲೂ ಮೂಡಬೇಕು

ರೋಣ: ಜೀವ ರಕ್ಷಣೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಜರುಗಿದ ಥರ್ಡ ಐ ಕ್ಯಾಮೇರಾ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅಪಘಾತ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಾರಿಯಾದ ಕಾನೂನುಗಳ ತಿಳಿವಳಿಕೆ ಎಲ್ಲರಲ್ಲೂ ಮೂಡಬೇಕು.‌ ರೋಣ ಪಟ್ಟಣದಲ್ಲಿ ಜರುಗುವ ಅಪಘಾತ ಮತ್ತು ಅಪರಾಧ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಪಟ್ಟಣದಲ್ಲಿ ಥರ್ಡ ಐ ಸಿಸಿ ಕ್ಯಾಮೇರಾ ಅಳವಡಿಸಲು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹10 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ.

ಈ ಕ್ಯಾಮೇರಾ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದ್ದು, ಪ್ರತಿಯೊಂದು ಕ್ಷಣದ ಘಟನೆ ಸೆರೆಹಿಡಿಯುತ್ತದೆ. ಹೆಲ್ಮೇಟ ರಹಿತ ವಾಹನ ಚಲಾಯಿಸುವ ಸವಾರರ ಮಾಹಿತಿ ಸಂಗ್ರಹಿಸಲಾಗುತ್ತದೆ.‌ ಹೆಲ್ಮೇಟ್ ಜೀವ ರಕ್ಷಕವಾಗಿದ್ದು, ಸವಾರರು ಹೆಲ್ಮೇಟ್‌ ಧರಿಸಿ ಪ್ರಯಾಣ ಬೆಳೆಸುವದು ಅತೀ ಮುಖ್ಯವಾಗಿದೆ. ಸಾರ್ವಜನಿಕರು, ವಾಹನ ಚಾಲಕರು, ಬೈಕ್ ಸವಾರರು ಸಂಚಾರ ನಿಯಮ ಪಾಲಿಸುವದರೊಂದಿಗೆ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು.

ಎಸ್ಪಿ ಬಿ.ಎಸ್. ನಾಮಗೌಡ್ರ ಮಾತನಾಡಿ, ಥರ್ಡ ಐ ಸಿಸಿ ಕ್ಯಾಮೇರಾಗಳ ಮೂಲಕ‌ ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ನಿಗಾ ವಹಿಸಲಾಗುವುದು. ಹೆಲ್ಮೇಟ್ ರಹಿತ ಸಂಚಾರ ಅಪರಾಧವಾಗಿದ್ದು, ಆಕಸ್ಮಾತ ಅಪಘಾತವಾದಲ್ಲಿ ಜೀವ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆಲ್ಮಟ್‌ ಧರಿಸಿ ಸಂಚರಿಸುವುದು ಕಡ್ಡಾಯವಾಗಿದೆ.‌ ಕೇವಲ ಬೈಕ್ ಸವಾರರಿಗೆ ದಂಡ ಹಾಕುವ ಉದ್ದೇಶವಲ್ಲ, ಸಂಚಾರಿ ನಿಯಮ ಪಾಲನೆ, ಅಪರಾಧ ಕ್ಯತ್ಯ ನಡೆಯದಂತೆ ತಡೆಯಲು ಥರ್ಡ ಐ ಕ್ಯಾಮೇರಾ ಪೊಲೀಸರಿಗೆ ಸಹಕಾರಿಯಾಗಲಿದೆ. ಈ ದಿಶೆಯಲ್ಲಿ ಥರ್ಡ ಐ ಕ್ಯಾಮೇರಾ ಅಳವಡಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಈ ವೇಳೆ‌ ಡಿವೈಎಸ್ಪಿ ಪ್ರಭುಗೌಡ.ಕೆ, ಸಿಪಿಐ ಎಸ್.ಎಸ್. ಬಿಳಗಿ, ಪಿಎಸ್ಐ ಎಲ್.ಕೆ. ಜೂಲಕಟ್ಟಿ, ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ, ಉಪಾಧ್ಯಕ್ಷ ಮಿಥುನ ಜಿ.ಪಾಟೀಲ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಭಾವರಾಜ ನವಲಗುಂದ, ಬಾವಾಸಾಬ್‌ ಬೇಟಗೇರಿ, ದುರ್ಗಪ್ಪ ಹಿರೇಮನಿ, ದಾವಲಸಾಬ ಬಾಡಿನ, ವೀರಯ್ಯ ನೆಲ್ಲೂರಮಠ, ಸಂಗಪ್ಪ ಜಿಡ್ಡಿಬಾಗೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.