ವಾಲ್ಮೀಕಿ ತತ್ವಾದರ್ಶ ಪರಿಪಾಲಿಸಿ

| Published : Oct 18 2024, 12:15 AM IST / Updated: Oct 18 2024, 12:16 AM IST

ಸಾರಾಂಶ

ಹಿಂದು ಧರ್ಮಕ್ಕೆ ಪವಿತ್ರ ರಾಮಾಯಣ ಕೊಡುಗೆಯಾಗಿ ನೀಡಿದ ಮಹಾತಪಸ್ವಿ ಮಹರ್ಷಿ ವಾಲ್ಮೀಕಿ ಆದರ್ಶ ವಿಚಾರಗಳು ಸ್ಮರಣೀಯ

ಶಿರಹಟ್ಟಿ: ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಸಮಾಜವು ಸದೃಢತೆ ಹೊಂದಬೇಕಾದರೆ ಗುರುವಿನ ಮಾರ್ಗದರ್ಶನ, ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ ಹಾಗೂ ವಿದ್ಯೆ ಅತಿ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಾಲ್ಮೀಕಿ ಜೀವನ ಶೈಲಿ, ತತ್ವ, ಆದರ್ಶ ಪರಿಪಾಲನೆ ಅಗತ್ಯ ಎಂದು ಸಮಾಜದ ಮುಖಂಡ ಸಣ್ಣವೀರಪ್ಪ ಹಳ್ಳೆಪ್ಪನವರ ಹೇಳಿದರು.

ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಪಂ ಹಾಗೂ ತಾಲೂಕು ಮಹರ್ಷಿ ವಾಲ್ಮೀಕಿ ಸಂಘ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪಟ್ಟಣದ ವಾಲ್ಮೀಕಿ ವೃತ್ತದ ಆವರಣದಿಂದ ನಡೆದ ವಾಲ್ಮೀಕಿ ಜಯಂತಿ ಮೆರವಣಿಗೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪರಿವರ್ತನೆ ಜಗದ ನಿಯಮ ಎಂಬಂತೆ ಶೋಷಿತ ವರ್ಗದಲ್ಲಿ ಜನಿಸಿ ಕಾಡಿನಲ್ಲಿ ನೆಲೆಸಿ ದರೋಡೆಯನ್ನು ತನ್ನ ಕಾಯಕ ಮಾಡಿಕೊಂಡಿದ್ದ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ಬರೆಯುವ ಮಟ್ಟಿಗೆ ಬದಲಾದ. ಹೀಗೆ ಬದಲಾವಣೆ ಮನುಷ್ಯನ ಸ್ಥಾನ ಎತ್ತರಕ್ಕೇರಿಸುತ್ತದೆ. ಅವರ ಅನುಯಾಯಿಗಳಾದ ನಾವುಗಳು ಅವರ ತತ್ವ, ಆದರ್ಶಗಳನ್ನು ಹಾಗೂ ಅವರ ವಿಚಾರಗಳನ್ನು ದಿನನಿತ್ಯದ ಜೀವದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮುಖಂಡ ಶಿವನಗೌಡ ಪಾಟೀಲ ಮಾತನಾಡಿ, ಹಿಂದು ಧರ್ಮಕ್ಕೆ ಪವಿತ್ರ ರಾಮಾಯಣ ಕೊಡುಗೆಯಾಗಿ ನೀಡಿದ ಮಹಾತಪಸ್ವಿ ಮಹರ್ಷಿ ವಾಲ್ಮೀಕಿ ಆದರ್ಶ ವಿಚಾರಗಳು ಸ್ಮರಣೀಯವಾಗಿವೆ. ಮಾನವ ಕುಲದಲ್ಲಿ ನೈತಿಕತೆಯ ಜಾಗೃತಿ ಮೂಡಿಸುವ ಜತೆಗೆ ಮನುಷ್ಯ ಬದುಕಿನಲ್ಲಿ ಶ್ರಮಿಸಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಎಂದು ಹೇಳಿದರು.

ಆದಿ ಕವಿ ಮಹರ್ಷಿ ವಾಲ್ಮೀಕಿ ಕೆಳವರ್ಗದಲ್ಲಿ ಜನಿಸಿದ್ದರೂ ಸಹ ತಮ್ಮ ಸಾಧನೆಯಿಂದ ಉತ್ತುಂಗಕ್ಕೇರುವ ಮುಖಾಂತರ ಇತಿಹಾಸದ ಪುಟಗಳಲ್ಲಿ ವಿರಾಜಮಾನರಾಗಿದ್ದಾರೆ. ಈ ಜಗತ್ತಿಗೆ ಅಹಿಂಸೆಯ ಸಂದೇಶ ನೀಡುವ ಮುಖಾಂತರ ಹಾಗೂ ಆದರ್ಶ ಜೀವನದ ರಾಮಾಯಣ ಪರಿಚಯಿಸಿರುವ ಇವರು ಸರ್ವ ಜನಾಂಗದ ಗುರುವಾಗಿದ್ದಾರೆ ಎಂದರು.

ಶಾಸಕ ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ತಹಸೀಲ್ದಾರ್‌ ಅನಿಲ ಬಡಿಗೇರ, ಸಮಾಜದ ಅಧ್ಯಕ್ಷ ಗೋವಿಂದಪ್ಪ ಶೆಟ್ಟೆಪ್ಪ ಬಾಗೇವಾಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮುತ್ತಣ್ಣ ಎಸ್. ಸಂಕನೂರ, ಕೌಸಿಕ ದಳವಾಯಿ, ರೇವಣೆಪ್ಪ ಮನಗೂಳಿ, ಬಸಣ್ಣ ನಾಯ್ಕರ, ಮಂಜುನಾಥ ಘಂಟಿ, ನಾಗರಾಜ ಲಕ್ಕುಂಡಿ, ಎಂ.ಕೆ. ಲಮಾಣಿ, ಅಕ್ಬರಸಾಬ್‌ ಯಾದಗಿರಿ, ಡಿ.ಆರ್. ಕೆಂಚಕ್ಕನವರ ಇತರರು ಇದ್ದರು.