ಸಾರಾಂಶ
- ಪ್ರತಿಭಾ ಪುರಸ್ಕಾರ, ನೌಕರರಿಗೆ ಗುರುರಕ್ಷೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ನಾಡಿನ ಮಠಗಳು ಅನ್ನ ದಾಸೋಹ ಹಾಗೂ ಜ್ಞಾನ ದಾಸೋಹವನ್ನು ತಪ್ಪದೇ ನೆರವೇರಿಸುತ್ತ, ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಂತಿವೆ. ಇದರಿಂದಲೇ ಇಂದು ಬಡತನ ರೇಖೆಯಲ್ಲಿದ್ದ ಬಡಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ತಾಲೂಕು ಬೇಡಜಂಗಮ ಸಮಾಜ ಸೇವಾ ಸಂಘ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ಹಾಗೂ ಸರ್ಕಾರಿ ನೌಕರರಿಗೆ ಗುರುರಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಡ ಜಂಗಮರಿಗೆ ಇತರೆ ಎಲ್ಲ ಸಮಾಜದವರು ಗೌರವದಿಂದ ಕಾಣುತ್ತಾರೆ. ಕಾಲಕಾಲಕ್ಕೆ ಎಲ್ಲರೂ ಬದಲಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೆ ತಮ್ಮ ಮಕ್ಕಳು ಉನ್ನತ ವ್ಯಾಸಂಗ ಪಡೆಯಲು ಸಹಕಾರ ಆಗುತ್ತದೆ. ಸಂಸ್ಕಾರದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಪಡೆದರೆ ಸನ್ಮಾರ್ಗದಲ್ಲಿ ಮುನ್ನಡೆಯಬಹುದು. ಅದಕ್ಕೆ ಪಾಲಕರು ತಮ್ಮ ಮಕ್ಕಳ ಉನ್ನತ ಶಿಕ್ಷಣ ಹೆಚ್ಚು ಒತ್ತು ನೀಡಿ ಎಂದರು.ನಾನು ಜಾತ್ಯತೀತ ನಿಲುವು ಹೊಂದಿ. ಅವಳಿ ತಾಲೂಕಿನ ಎಲ್ಲ ಸಮಾಜಗಳ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಈ ಕಾರಣಕ್ಕೆ ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಮನೆ ಮಗನಂತೆ ಕಾಣುತ್ತಿದ್ದಾರೆ. ಇಂತಹ ಅವಳಿ ತಾಲೂಕಿನಲ್ಲಿ ಸೇವೆ ಮಾಡುತ್ತಿರುವುದು ನನ್ನ ತಂದೆ-ತಾಯಿ ಮಾಡಿದ ಪುಣ್ಯ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಮಾತನಾಡಿ, ಮಕ್ಕಳ ಸುಪ್ತ ಪತ್ರಿಭೆ ಗುರುತಿಸಿ ಮಾನ್ಯತೆ ನೀಡುವುದು ಪಾಲಕರ ಕರ್ತವ್ಯ. ಅವರಿಗೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಚ್ಛಾಶಕ್ತಿ ಇದೆಯೋ, ಅದನ್ನು ಸಾಧಿಸಲು ಅವಕಾಶ ಮಾಡಿಕೊಡಿ. ನಿಮಗೆ ಅರಿವಿಲ್ಲದ ಕ್ಷೇತ್ರಗಳ ಬಗ್ಗೆ ಅವರನ್ನು ಒತ್ತಾಯಪೂರ್ವಕವಾಗಿ ಓದಿ ಎಂದು ಆಗ್ರಹಿಸಬೇಡಿ ಎಂದು ಸಲಹೆ ನೀಡಿದರು.ಪಂಚಾಚಾರ್ಯರ ಸಮಾಗಮ:
ಲಿಂ.ಚಂದ್ರಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಹೊನ್ನಾಳಿಯಲ್ಲಿ 2 ದಶಕಗಳ ಹಿಂದೆ ಯುಗಮಾನೋತ್ಸವ ನಡೆದಾಗ ಪಂಚಾಚಾರ್ಯರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಎಲ್ಲರಿಗೂ ಆಶೀರ್ವಚನ ನೀಡಿದ್ದರು. ಅದಾದ ನಂತರ ಈಗ ಮತ್ತೆ ದಾವಣಗೆರೆಯಲ್ಲಿ 2 ದಿನಗಳ ಕಾಲ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಪಂಚಾಚಾರ್ಯರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು, ಭಕ್ತರಿಗೆ ಮಾರ್ಗದರ್ಶನ ನೀಡುವುದು ಸಂತಸದ ವಿಚಾರ ಎಂದರು.ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ, ರಾಂಪುರ ಹಾಲಸ್ವಾಮೀಜಿ ಮಠದ ಶಿವಕುಮಾರ ಸ್ವಾಮೀಜಿ, ಕತ್ತಿಗೆ ಮಠದ ಚನ್ನಪ್ಪ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ವಾಗೀಶ್ ಸ್ವಾಮಿ, ತಾಲೂಕು ಅಧ್ಯಕ್ಷ ಬೈರನಹಳ್ಳಿ ಎಂ.ಪಂಚಾಕ್ಷರಯ್ಯ, ಪ್ರಾಸ್ತಾವಿಕವಾಗಿ ನಿವೃತ್ತ ಶಿಕ್ಷಕ ರುದ್ರಯ್ಯ, ಉಪನ್ಯಾಸಕರಾಗಿ ಪತ್ರಕರ್ತ ಎಂ.ಪಿ.ಎಂ. ವಿಜಯಾನಂದ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎ.ಎಂ. ಚಂದ್ರಯ್ಯ, ರೇವಣಸಿದ್ದಯ್ಯ, ಪತ್ರೇಶ್, ಶಿವಕುಮಾರ ಸ್ವಾಮಿ, ಪತ್ರಕರ್ತ ಹೊಳೆಮಠ ಶಾಸ್ತ್ರಿ, ಎಂ.ಎಸ್. ಪ್ರಕಾಶ್ ಇತರರು ಇದ್ದರು.- - -
(ಕೋಟ್) ಸಂಘಟನೆ ಇದ್ದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಎಲ್ಲರೂ ಸಂಘಟನೆಗೆ ಹೆಚ್ಚು ಒತ್ತು ನೀಡಿ. ವೈಯಕ್ತಿಕ ಅಭಿಪ್ರಯಗಳು ಏನೇ ಇದ್ದರೂ ಸಮಾಜ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಆಗ ಸಮಾಜ ಗಟ್ಟಿಯಾಗಿ ಬೆಳೆಯುತ್ತದೆ. ಹಾಗೆಯೇ ಧರ್ಮವನ್ನು ಕಾಪಾಡುವ ಕೆಲಸವೂ ನಮ್ಮದಾಗಬೇಕು. ಅನಿವಾರ್ಯತೆ ಬಂದರೆ ಎಲ್ಲರೂ ಧರ್ಮದ ಪರವಾಗಿ ಕೆಲಸ ಮಾಡಲು ಸಿದ್ಧರಾಗಬೇಕು.- ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಶ್ರೀ, ಕಡೆನಂದಿಹಳ್ಳಿ ಮಠ
- - --20ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಗುರುರಕ್ಷೆ ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.