ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ, ಹಲವೆಡೆ ಅವ್ಯವಸ್ಥೆಯಿಂದ ಕೂಡಿವೆ, ಮಕ್ಕಳಿಗೆ ಗುಣಮಟ್ಟದ ಊಟ ನೀಡುತ್ತಿಲ್ಲ, ಅಡುಗೆ ಮನೆಯೊಳಗೆ ಅಶುಚಿತ್ವ ತಾಂಡವವಾಡುತ್ತಿದೆ. ಇಷ್ಟೆಲ್ಲಾ ಅವಸ್ಥೆಗಳಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನೀವು ಶಾಲೆಗಳಿಗೆ ಏಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ.- ಇದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೀತಿ.
ನಗರದ ಡಯಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಕ್ಷರದಾಸೋಹ ಮತ್ತು ಬಿಇಒಗಳೊಂದಿಗೆ ಸಭೆ ನಡೆಸಿದ ವೇಳೆ, ನಾನು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ಅಲ್ಲಿನ ಅವ್ಯವಸ್ಥೆಗಳನ್ನು ನನ್ನ ಗಮನಕ್ಕೆ ತರುತ್ತಿದ್ದಾರೆ. ಶೌಚಾಲಯಗಳ ವ್ಯವಸ್ಥೆ ಸರಿಯಿಲ್ಲದೆ ಹೆಣ್ಣುಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಎಷ್ಟೋ ಶಾಲೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ಊಟ ಕೊಡುತ್ತಿಲ್ಲ. ಅಡುಗೆ ಮನೆಗಳು ಸ್ವಚ್ಛತೆಯಿಂದ ಕೂಡಿಲ್ಲದಿರುವ ಬಗ್ಗೆ ನನಗೆ ದೂರುಗಳು ಕೇಳಿಬರುತ್ತಿವೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನೀವು ಹದಿನೈದು ದಿನಕ್ಕೆ, ತಿಂಗಳಿಗೊಮ್ಮೆ ನಿಮ್ಮ ನಿಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತಂತೆ ಪರಿಶೀಲನೆ ನಡೆಸಬೇಕು. ಅವ್ಯವಸ್ಥೆಗಳು ಕಂಡುಬಂದಲ್ಲಿ ತಕ್ಷಣವೇ ಪರಿಹರಿಸುವಂತೆ ಶಿಕ್ಷಕರಿಗೆ ಸೂಚಿಸಬೇಕು. ಸರಿಪಡಿಸಿಕೊಳ್ಳದಿದ್ದರೆ ಅಂತಹವರ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದರು.
ಶಾಲೆಗಳಿಗೆ ಭೇಟಿ ನೀಡಿದಾಗ ಬಿಸಿಯೂಟ ಅಡುಗೆ ತಯಾರಕರು ಆರೋಗ್ಯಕರವಾಗಿರಬೇಕು, ಅಡುಗೆ ನಿಯಮಗಳನ್ನು ಪಾಲಿಸುವುದರೊಂದಿಗೆ ಡ್ರೆಸ್‌ಕೋಡ್‌ನಲ್ಲಿರಬೇಕು. ಸರ್ಕಾರಗಳು ಶಾಲಾ ಮಕ್ಕಳಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳು ಸಮಗ್ರವಾಗಿ ಮತ್ತು ಸಮರ್ಪಕವಾಗಿ ತಲಪಬೇಕು ಎಂದು ಹೇಳಿದರು.ಅಕ್ಷರ ದಾಸೋಹ ಯೋಜನೆಯಡಿ ಜಿಲ್ಲೆಯಲ್ಲಿ ಯಾವುದೇ ಒಂದು ಪ್ರಕರಣಗಳೂ ದಾಖಲಾಗಿಲ್ಲ. ನಮ್ಮ ಬಳಿಗೆ ವಿದ್ಯಾರ್ಥಿಗಳಿಂದ ಅಥವಾ ಪೋಷಕರಿಂದ ಹಾಗೂ ಶಾಲಾಭಿವೃದ್ದಿ ಸಮಿತಿಯಿಂದ ದೂರುಗಳು ಕೇಳಿಬರುತ್ತಿವೆ. ಹಾಗಾದರೆ ಬಿಇಒಗಳು ತಾಲೂಕು ಕೇಂದ್ರಗಳಲ್ಲಿರುವ ಶಾಲೆಗಳಿಗೆ ಎಷ್ಟು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದೀರಿ, ಏನೇನು ಅವ್ಯವಸ್ಥೆಗಳು ಕಂಡುಬಂದಿವೆ ಎಂಬುದನ್ನು ಎಲ್ಲಿಯೂ ದಾಖಲಿಸಿಲ್ಲ. ಶಿಕ್ಷಣಾಧಿಕಾರಿಗಳಾಗಿ ಇಷ್ಟೊಂದು ಬೇಜವಾಬ್ದಾರಿ ವರ್ತನೆ ಸರಿಯಲ್ಲ.
ನಿಮ್ಮ ವರ್ತನೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವುದೇ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಯೊಳಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಆಕರ್ಷಿಸುವಂತೆ ಮಾಡಬೇಕು. ನೀವೇ ಬೇಜವಾಬ್ದಾರಿ ಪ್ರದರ್ಶಿಸಿದರೆ ಮಕ್ಕಳು ಶಾಲೆಯ ಕಡೆಗೆ ಮುಖಮಾಡದಂತಾಗುತ್ತಾರೆ. ಇದಕ್ಕೆ ಅವಕಾಶ ನೀಡದಂತೆ ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಗಮನಹರಿಸುವಂತೆ ತಿಳಿಸಿದರು.
ನಿಮ್ಮೆಲ್ಲರಿಗೂ ಒಂದು ತಿಂಗಳು ಗಡುವು ನೀಡುತ್ತೇನೆ. ಅಷ್ಟರೊಳಗೆ ಶಾಲೆಗಳಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ತಿಂಗಳು ಮತ್ತೊಂದು ಸಭೆಗೆ ಬರುತ್ತೇನೆ. ಬಿಇಒಗಳು ಮತ್ತು ಅಕ್ಷರ ದಾಸೋಹ ಅಧಿಕಾರಿಗಳು ತಪಾಸಣೆ ನಡೆಸಿ, ವರದಿ ಸಿದ್ದಪರಿಸಿಕೊಂಡಿರಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಡಿಡಿಪಿಐ ಲೋಕೇಶ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರವಿಕುಮಾರ್, ಆಹಾರ ಇಲಾಖೆ ಅಧಿಕಾರಿ ಪ್ರತೀಕ್ ಹೆಗ್ಗಡೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))