ಕಾರಾಗೃಹಗಳಲ್ಲಿ ಆಹಾರದ ಸುರಕ್ಷತೆ ಮತ್ತು ಸ್ವಚ್ಛತೆ, ಅಡುಗೆಮನೆಯ ಶುಚಿತ್ವ. ಆಹಾರ ತಯಾರಿಸುವ ಸ್ಥಳವು ಧೂಳು, ಕೀಟಗಳು ಮತ್ತು ಕೊಳಕಿನಿಂದ ಮುಕ್ತವಾಗಿರಬೇಕು. ಅಡುಗೆ ಪಾತ್ರೆಗಳನ್ನು ಪ್ರತಿದಿನ ಬಿಸಿ ನೀರು ಮತ್ತು ಸೋಪಿನಿಂದ ಚೆನ್ನಾಗಿ ತೊಳೆಯಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ರಾಜ್ಯ ಆಹಾರ ಆಯೋಗ ಮತ್ತು ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ನಗರದ ಕೇಂದ್ರ ಕಾರಾಗೃಹದಲ್ಲಿ ಬಂಧಿತ ಆರೋಪಿಗಳ ಆರೋಗ್ಯ ಮತ್ತು ಆಹಾರ ಭದ್ರತೆ ಬಗ್ಗೆ ಪರಿಶೀಲಿಸಲು ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ದಿಢೀರ್ ಭೇಟಿ ನೀಡಿದರು.ಕಾರಾಗೃಹ ವಾಸಿಗಳಿಗೆ ಶುದ್ಧ, ಪೌಷ್ಟಿಕ ಮತ್ತು ಸುರಕ್ಷಿತ ಆಹಾರ ಒದಗಿಸುವುದು ಅವರ ಮೂಲಭೂತ ಹಕ್ಕು. ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಎಚ್.ಕೃಷ್ಣ ತಿಳಿಸಿದರು.
ಕಾರಾಗೃಹಗಳಲ್ಲಿ ಆಹಾರದ ಸುರಕ್ಷತೆ ಮತ್ತು ಸ್ವಚ್ಛತೆ, ಅಡುಗೆಮನೆಯ ಶುಚಿತ್ವ. ಆಹಾರ ತಯಾರಿಸುವ ಸ್ಥಳವು ಧೂಳು, ಕೀಟಗಳು ಮತ್ತು ಕೊಳಕಿನಿಂದ ಮುಕ್ತವಾಗಿರಬೇಕು. ಅಡುಗೆ ಪಾತ್ರೆಗಳನ್ನು ಪ್ರತಿದಿನ ಬಿಸಿ ನೀರು ಮತ್ತು ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ವೈಯಕ್ತಿಕ ಸ್ವಚ್ಛತೆ. ಅಡುಗೆ ಮಾಡುವ ಮತ್ತು ಬಡಿಸುವ ಸಿಬ್ಬಂದಿ ಅಥವಾ ಕೈದಿಗಳು ಕೈಗಳನ್ನು ಸಾಬೂನಿನಿಂದ ತೊಳೆಯುವುದು, ತಲೆಗೆ ಕ್ಯಾಪ್ ಮತ್ತು ಕೈಗವಸುಗಳನ್ನು ಧರಿಸುವುದು ಕಡ್ಡಾಯವಾಗಿರಬೇಕು.ಕುಡಿಯಲು ಮತ್ತು ಅಡುಗೆಗೆ ಶುದ್ಧೀಕರಿಸಿದ ನೀರನ್ನೇ ಬಳಸಬೇಕು. ಅಗತ್ಯವಿರುವ ಅಡುಗೆ ಮಾಡಲು ಅವಶ್ಯ ಇರುವ ಸಾಮಗ್ರಿಗಳು ಮತ್ತು ಗ್ರಂಥಾಲಯಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಮಾತನಾಡಿ, ಪೌಷ್ಟಿಕಾಂಶಯುಕ್ತ ಆಹಾರ ಸಮತೋಲಿತ ಆಹಾರ ವಾಸಿಗಳ ವಯಸ್ಸು ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಕಾರ್ಬೋಹೈಡ್ರೇಟ್ಗಳು ಅನ್ನ, ರಾಗಿ ಮುದ್ದೆ, ಚಪಾತಿ, ಪ್ರೋಟೀನ್ ಬೇಳೆಕಾಳುಗಳು, ಮೊಟ್ಟೆ, ವಿಟಮಿನ್ ಮತ್ತು ಖನಿಜಾಂಶಗಳಿರುವ ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ನೀಡಬೇಕು ಎಂದರು.ನಿಯಮಿತ ತಪಾಸಣೆ, ಕಾರಾಗೃಹದ ವೈದ್ಯಾಧಿಕಾರಿಗಳು ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಆಹಾರದ ಗುಣಮಟ್ಟವನ್ನು ನಿರಂತರವಾಗಿ ಪರೀಕ್ಷಿಸಬೇಕು. ಆಹಾರ ಬಡಿಸುವ ಮೊದಲು ಜೈಲು ಅಧಿಕಾರಿಗಳು ಅದನ್ನು ರುಚಿ ನೋಡಿ ಗುಣಮಟ್ಟ ಖಚಿತಪಡಿಸಿಕೊಳ್ಳುವುದು ಜೈಲು ಕೈಪಿಡಿಯ ನಿಯಮವಾಗಿದೆ ಎಂದರು.
ರಾಷ್ಟ್ರೀಯ ಮಾನವ ಹಕ್ಕುಗಳ ತರಬೇತುದಾರ ಎಂ.ಗುರುಪ್ರಸಾದ್, ಜಿಲ್ಲಾ ಕಾರಾಗೃಹದ ಅಧೀಕ್ಷಕರು, ಮಂಡ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳ ನಿಯೋಗ ಹಾಜರಿದ್ದರು.