ಸಾರಾಂಶ
-ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ
------ಕನ್ನಡಪ್ರಭ ವಾರ್ತೆ ಕೊಡೇಕಲ್
ಜಗತ್ತಿಗೆ ಕೃಷಿಯೇ ಮೂಲಾಧಾರವಾಗಿದ್ದು, ದೇಶದ ಜನತೆಯ ಹಸಿವನ್ನು ನೀಗಿಸುವ ಅನ್ನದಾತರು ದೇಶದ ನಿಜವಾದ ಸಂಪತ್ತು ಎಂದು ಗುರು ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.ಗ್ರಾಮದ ರೈತ ಮಲ್ಲಣ್ಣ ಆರಲಗಡ್ಡಿ ಅವರ ಜಮೀನಿನಲ್ಲಿ ಇತ್ತೀಚೆಗೆ ನಡೆದ ಕೃಷಿ ವಿಚಾರ ಸಂಕಿರಣ ಹಾಗೂ 2ನೇಯ ವರ್ಷದ ನಾಗದೇವತೆಯ ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗಡಿಯನ್ನು ಕಾಯುತ್ತಾ ನಮ್ಮ ರಕ್ಷಣೆ ಮಾಡುತ್ತಿರುವ ಸೈನಿಕರು, ದೇಶದ ಜನತೆಯ ಹಸಿವನ್ನು ನೀಗಿಸುವ ಅನ್ನದಾತರನ್ನು ನಾವು ಎಂದಿಗೂ ಮರೆಯಬಾರದು. ವರ್ಷವಿಡೀ ಮಳೆ, ಚಳಿ, ಬಿಸಿಲೆನ್ನದೆ ದುಡಿಯುವ ಅನ್ನದಾತರು ಅನುಭವಿಸುವ ಕಷ್ಟಗಳು ನೂರಾರು. ಅತಿಯಾದ ಮಳೆ ಬಂದರೂ ತೊಂದರೆ ಅನುಭವಿಸುವ ರೈತರನ್ನು ಕೀಳಾಗಿ ನೋಡುವುದು ಸರಿಯಲ್ಲ. ಆ ಒಂದು ದೃಷ್ಟಿಕೋನದಿಂದ ನಾವು ಹೊರ ಬಂದು ನೋಡಿದಾಗ ಮಾತ್ರ ರೈತರ ನೈಜ ಸ್ಥಿತಿ ನಮಗೆ ಅರ್ಥವಾಗುತ್ತದೆ ಎಂದು ಹೇಳಿದರು.ಮಾಳನೂರ ಕೃಷಿ ಸಂಶೋಧನಾ ಕೇಂದ್ರ ಪ್ರಾಧ್ಯಾಪಕ ವಿಜಯಕುಮಾರ ಪಲ್ಯೆ ಮಾತನಾಡಿ, ರೈತರು ಫಸಲು ಬೆಳೆಯುವ ಮುನ್ನ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿನ ಫಲಿತಾಂಶದ ಆಧಾರದ ಮೇಲೆ ಬೆಳೆಯನ್ನು ಸಮತೋಲನ ರೀತಿಯಲ್ಲಿ ಬೆಳೆಯಬೇಕು. ರಸಗೊಬ್ಬರವನ್ನು ಮಿತವಾಗಿ ಬಳಕೆ ಮಾಡಬೇಕು. ಕೃಷಿಯಲ್ಲಿ ಸಾವಯವ ಪದ್ಧತಿಯನ್ನು ಅನುಸರಿಸುವ ಮೂಲಕ ಹೆಚ್ಚಿನ ಇಳುವರಿ ಪಡೆದುಕೊಳ್ಳುವತ್ತ ಮತ್ತು ಬೆಳೆ ಬದಲಾವಣೆ ಮಾಡುವುದರ ಮೂಲಕ ಕೃಷಿಯಲ್ಲಿ ಲಾಭ ಪಡೆದುಕೊಳ್ಳಬೇಕಿದೆ ಎಂದರು.
ಬಸವ ಪೀಠಾಧಿಪತಿ ವೃಷಭೇಂದ್ರ ಅಪ್ಪನವರು ನೇತೃತ್ವ ವಹಿಸಿದ್ದ ಕಾರ್ಯಕ್ರಮದಲ್ಲಿ ವಲಯದ ಪ್ರಗತಿಪರ ರೈತರನ್ನು ಸತ್ಕರಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ರೈತ ಮಲ್ಲಣ್ಣ ಆರಲಗಡ್ಡಿ ಅವರ ಜಮೀನಿನಲ್ಲಿರುವ ನಾಗದೇವತೆಗೆ ವಿಶೇಷ ಪೂಜೆ ನಂತರ ಪ್ರಸಾದ ವಿತರಣೆ ನಡೆಯಿತು.ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಮನಗೌಡ ಮಾಲಿಪಾಟೀಲ್, ಸಂಗಪ್ಪ ಶಿವಪೂರ, ಅಯ್ಯಪ್ಪ ಪಡಶೆಟ್ಟಿ, ಮಲ್ಲಣ್ಣ ಆರಲಗಡ್ಡಿ, ಹೆಡ್ ಕಾನಸ್ಟೇಬಲ್ ಸುಭಾಷ್, ಗುರಣ್ಣ ಧನ್ನೂರ, ಸಂಗನಗೌಡ ಪೊಲೀಸ್ ಪಾಟೀಲ್, ವಿಜಯಕುಮಾರ ಮದರಿ ಸೇರಿದಂತೆ ಇತರರು ಇದ್ದರು. ಸಂಗಮೇಶ ಪಾಟೀಲ್ ನಿರೂಪಿಸಿದರು. ಮಲ್ಲಣ್ಣ ಸ್ವಾಗತಿಸಿದರು. ಗುಂಡಣ್ಣ ನಗನೂರ ವಂದಿಸಿದರು.
---ಫೋಟೋ
6ವೈಡಿಆರ್ 1: ಕೊಡೇಕಲ್ ಗ್ರಾಮದ ರೈತ ಮಲ್ಲಣ್ಣ ಆರಲಗಡ್ಡಿ ಜಮೀನಿನಲ್ಲಿ ನಡೆದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.------