ಬೆಣ್ಣಿಹಳ್ಳ ನೀರಾವರಿ ಯೋಜನೆ ನಿರೀಕ್ಷೆಯಲ್ಲಿ ಅನ್ನದಾತರು

| Published : Jul 29 2024, 12:51 AM IST

ಸಾರಾಂಶ

ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ನವಲಗುಂದ, ಗದಗ ಜಿಲ್ಲೆಯ ರೋಣ, ನರಗುಂದ ತಾಲೂಕಿನಲ್ಲಿ ಪ್ರವಾಹ ಸೃಷ್ಟಿಸುವ ಬೆಣ್ಣಿಹಳ್ಳದ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈ ಪ್ರದೇಶದ ಅನ್ನದಾತರು ಭಾರೀ ನಿರೀಕ್ಷೆ ಹೊಂದಿದ್ದಾರೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ನವಲಗುಂದ, ಗದಗ ಜಿಲ್ಲೆಯ ರೋಣ, ನರಗುಂದ ತಾಲೂಕಿನಲ್ಲಿ ಪ್ರವಾಹ ಸೃಷ್ಟಿಸುವ ಬೆಣ್ಣಿಹಳ್ಳದ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈ ಪ್ರದೇಶದ ಅನ್ನದಾತರು ಭಾರೀ ನಿರೀಕ್ಷೆ ಹೊಂದಿದ್ದಾರೆ.

ಬೆಣ್ಣಿಹಳ್ಳ ತಾಲೂಕಿನ ಹೊಸೂರ ಗ್ರಾಮದ ಒಂದು ತಿಪ್ಪೆಗುಂಡಿಯಲ್ಲಿ ಹುಟ್ಟಿದೆ ಎಂಬ ವಿಷಯ ಸಾಕಷ್ಟು ಜನರಿಗೆ ತಿಳಿದಿಲ್ಲ. ಬೆಣ್ಣಿಹಳ್ಳಕ್ಕೆ ಪ್ರವಾಹ ಬಂದು ಹೊಲಕ್ಕೆ ನುಗ್ಗಿ ಹಾನಿಯಾದ ಸಂದರ್ಭದಲ್ಲಿ ಇದು ಸುದ್ದಿಯಾಗುತ್ತದೆ. ಉಪಯುಕ್ತವಾದ ಈ ಬೆಣ್ಣಿಹಳ್ಳ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾಯಕಲ್ಪ ನೀಡಬೇಕಿದೆ.

ಹೊಸೂರ ಗ್ರಾಮದ ರುದ್ರಗೌಡ್ರ ಪಾಟೀಲರ ಹೊಲದಲ್ಲಿ ಉದಯಿಸುವ ಬೆಣ್ಣಿಹಳ್ಳ ಮಳೆಗಾಲದಲ್ಲಿ ಹರಿಯುತ್ತಲೇ ತನ್ನ ವಿಸ್ತಾರವನ್ನು (ಹರಿವು) ಹೆಚ್ಚಿಸಿಕೊಂಡಿದೆ. ಮೂಲ ಸ್ಥಾನದಲ್ಲಿ ಅಷ್ಟೇನು ದೊಡ್ಡ ಪ್ರಮಾಣದಲ್ಲಿ ಈ ಹಳ್ಳ ಇಲ್ಲವಾದರೂ ಇಲ್ಲಿಂದ ಹರಿಯುವ ನೀರು ಸಮರ್ಪಕವಾಗಿ ಬಳಸಲು ಯಾವುದೇ ಯೋಜನೆ ಇಲ್ಲ.

ಆಂದಿನ ಮುಖ್ಯಮಂತ್ರಿಗಳು ಹಾಗೂ ಈಗಿನ ಸಂಸದರಾದ ಬಸವರಾಜ ಬೊಮ್ಮಾಯಿಯವರು ಹರಿಯುವ ನೀರು ಕೆರೆಗೆ ಸೇರುವಂತೆ ಮಾಡಿ, ಹಾನಿ ತಡೆಗೆ ಕ್ರಮವನ್ನು ಕೈಗೊಂಡಿದ್ದಾರೆ. ಹರಿದು ಹೋಗುವ ನೀರು ಸಂಗ್ರಹಿಸಿ ರೈತರ ಹೊಲಗಳಿಗೆ ನೀರು ಹರಿಸುವ ಯೋಜನೆ ಅನುಷ್ಠಾನಗೊಳಿಸದಲ್ಲಿ ರೈತರಿಗೆ ವರದಾನವಾಗಲಿದೆ.

ನವಲಗುಂದ, ಕುಂದಗೋಳ, ನರಗುಂದ ಜನರಿಗೆ ಬಹು ಉಪಯುಕ್ತ ಹಳ್ಳ ಎಂದೇ ಹೇಳಲಾಗುತ್ತದೆ. ಅಲ್ಲಿಯೂ ಈ ಹಳ್ಳದ ನೀರು ವ್ಯರ್ಥವಾಗಿಯೇ ಹರಿದು ಹೋಗುತ್ತಿದೆಯೇ ಹೊರತು ಸದ್ಬಳಕೆಯಾಗುತ್ತಿಲ್ಲ.

ಬೆಣ್ಣಿಹಳ್ಳ ಗುರುತಿಸಲು ಗುರ್ತು ಇಲ್ಲ: ಪೂರ್ವಜರ ಕಾಲದಲ್ಲಿ ಬಾವಿ ರೂಪದಲ್ಲಿ ಹೊಲದಲ್ಲಿಯೇ ಜನ್ಮ ತಾಳಿದ ಈ ಬೆಣ್ಣಿಹಳ್ಳ ಮುಚ್ಚಿಸಿದ್ದಾರೆ. ಇದರ ಮೇಲೆ ಗಿಡಮರಗಳನ್ನು ನೆಟ್ಟಿದ್ದಾರೆ, ಇದೇ ಗಿಡವು ಹೊಳೆ ಹೊನ್ನವ್ವದೇವಿ ಎಂದು ರೈತರು ಪೂಜಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ನೀರು ಉಕ್ಕಿ ಹರಿದು ಹೋಗಲು ಸಣ್ಣದೊಂದು ಸಾರವನ್ನು ಕೂಡಾ ಮಾಡಲಾಗಿದೆ.

ಈ ಮೂಲಕ ಮಳೆ ನೀರು ಹರಿದು ಗ್ರಾಮದ ನಾಕನಕಟ್ಟಿ ಕೆರೆಗೆ ಸೇರುತ್ತದೆ, ಇಲ್ಲಿಂದಲೆ ಯತ್ನಳ್ಳಿ ಗ್ರಾಮದ ಭೂಮಿಯ ಮೇಲೆ ದುಂಡಶಿ, ಮಡ್ಲಿ, ಶ್ಯಾಡಂಬಿ, ತಡಸ ಹೊಲಗಳಲ್ಲಿ ಹಾಯ್ದು ಕುಂದಗೋಳ ತಾಲೂಕಿನ ಜೀಗಳೂರ ಕುಬಿಹಾಳ, ನಾಗರಹಳ್ಳಿ, ಮೂಲಕ ನವಲಗುಂದ, ಕುಂದಗೋಳ ನರಗುಂದ ತಾಲೂಕುಗಳಲ್ಲಿ ಬೃಹತ್ ಬೆಣ್ಣಿಹಳ್ಳವಾಗಿ ಹರಿಯುತ್ತದೆ.

ನಮ್ಮ ಭಾಗದಲ್ಲಿ ಹುಟ್ಟಿದ ಬೆಣ್ಣಿಹಳ್ಳ ನಮ್ಮೂರಿನಿಂದ ಬೇರೆ ತಾಲೂಕಿಗೂ ಹರಿದಿದೆ, ಮಳೆಗಾಲದಲ್ಲಿ ನಮ್ಮೂರನ್ನೊಳಗೊಂಡು ನುಗ್ಗುತ್ತಿದ್ದ ನೀರು ಬಹಳ ಹಾನಿ ಮಾಡುತ್ತಿದೆ. ಓಡಾಡಲು ಕಷ್ಟವಾಗಿತ್ತು, ಈಗ ಕಾಲುವೆ ಮಾಡಿದ್ದು ನೀರು ಕೆರೆಗೆ ಸೇರುತ್ತಿದೆ. ಮಡ್ಲಿ- ತಡಸ ಹಾನಗಲ್ ಸೇರುವ ರಸ್ತೆಯ ಮಧ್ಯದಲ್ಲಿ ಬೆಣ್ಣಿಹಳ್ಳ ಇರುವುದರಿಂದ ಇಲ್ಲಿಯ ಬ್ರಿಜ್ ಕೂಡಾ ನಿರ್ಮಿಸಲಾಗಿದೆ. ಆದರೆ ಸೇತುವೆ ಪಕ್ಕದಲ್ಲಿ ಸರಿಯಾದ ಕಾಲುವೆ ನಿರ್ಮಾಣಕ್ಕೂ ಲಕ್ಷಾಂತರ ರು. ಮಂಜೂರಾಗಿದ್ದು ಕೆಲಸ ಮಾತ್ರ ಆಗದೆ ಈ ಭಾಗದಲ್ಲಿ ಹಾದು ಹೋಗುವ ವಾಹನಗಳು ಮೇಲಿಂದ ಮೇಲೆ ನೆಲಕ್ಕುರುಳುವುದು, ಹೆಚ್ಚಿನ ತೂಕದ ವಾಹನ ಹೋದರೂ ತಡೆದುಕೊಳ್ಳದಂತಾಗಿದೆ. ಆದ್ದರಿಂದ ಇಲ್ಲಿ ಸೇತುವೆ ನಿರ್ಮಿಸಿದ್ದರೂ ಸಂಪರ್ಕ ರಸ್ತೆಯನ್ನು ತಕ್ಷಣವಾಗಿ ನಿರ್ಮಿಸುವುದು ಅವಶ್ಯವಾಗಿದೆ ಎಂದು ಆಗ್ರಹಿಸುವುದಾಗಿ ಹಾವೇರಿ ಜಿಲ್ಲಾ ರೈತ ಸೇನಾ ಅಧ್ಯಕ್ಷ ವರುಣಗೌಡ್ರ ಎಂ. ಪಾಟೀಲ ಹೇಳಿದರು.

ಸತತವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ತಾಲೂಕಿನ ಕುನ್ನೂರ -ಶ್ಯಾಡಂಬಿ ಮಧ್ಯದಲ್ಲಿರುವ ಬೆಣ್ಣಿ ಹಳ್ಳವನ್ನು ನೋಡುತ್ತಿದ್ದಂತೆಯೇ ಕಾರು-ಬೈಕು ಸವಾರರ ನಿಂತು ನೋಡುತ್ತಾರೆ. ಇದೂ ಒಂದು ಜಲಪಾತವಾಗಿ ಹೊರಹೊಮ್ಮಿದೆ. ನೋಡುಗರು ನೀರಲ್ಲಿ ಇಳಿದು ಪೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ.