ಬರ ಅಧ್ಯಯನ ತಂಡದ ಎದುರು ಅಳಲು ತೋಡಿಕೊಂಡ ಅನ್ನದಾತರು

| Published : Oct 08 2023, 12:00 AM IST

ಸಾರಾಂಶ

ಲಕ್ಷ್ಮೇಶ್ವರದ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಎದುರು ರೈತರು ಅಳಲು ತೋಡಿಕೊಂಡರು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ ಮುಂಗಾರು ಮಳೆಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿಗೆ ಶುಕ್ರವಾರ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಇಲ್ಲಿಯ ಜಮೀನುಗಳಿಗೆ ಆಗಮಿಸಿ ಬೆಳೆಗಳ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಬರ ಪೀಡಿತ ಪ್ರದೇಶಗಳಲ್ಲಿನ ಗೋವಿನ ಜೋಳ, ಶೇಂಗಾ, ಮೆಣಸಿನಕಾಯಿ, ಸೂರ್ಯಕಾಂತಿ ಹಾಗೂ ಈರುಳ್ಳಿ ಬೆಳೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಬರ ಅಧ್ಯಯನ ತಂಡ ಗೊಜನೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ತಮ್ಮ ಅಳಲು ತೋಡಿಕೊಂಡರು, ಪ್ರಸಕ್ತ ವರ್ಷದ ಮುಂಗಾರು ಮಳೆಗಳು ಬಾರದೆ ಇರುವುದರಿಂದ ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ನೆಲ ಬಿಟ್ಟು ಮೇಲೆ ಎಳದಂತವಾಗಿದೆ. ಇದರಿಂದ ರೈತರ ಸ್ಥಿತಿ ಅಯೋಮಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಯೋಗ್ಯ ರೀತಿಯಲ್ಲಿ ಬೆಳೆ ಪರಿಹಾರ ಮತ್ತು ಬೆಳೆ ಹಾನಿಯನ್ನು ಈ ಕೂಡಲೆ ಬಿಡುಗಡೆ ಮಾಡಿದಲ್ಲಿ ರೈತರು ಉಳಿಯುವರು, ಇಲ್ಲವಾದಲ್ಲಿ ಬೇರೆ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ. ರೈತರ ಬೆಳೆ ಸಾಲ ಮನ್ನಾ ಮಾಡಬೇಕು, ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಹಾಗೂ ಅನುಕೂಲವಾಗುವ ಇನ್ನಿತರ ಪ್ರೋತ್ಸಾಹಕ ಯೋಜನೆಗಳನ್ನು ಘೋಷಣೆ ಮಾಡಿ ರೈತರ ಉಳಿವಿಗೆ ಸರ್ಕಾರಗಳು ಮುಂದಾಗಬೇಕು ಎಂದು ಹೇಳಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಗೊಜನೂರ ಗ್ರಾಮದ ರೈತ ಮಹಿಳೆಯರು ಕಿಡಿ ಕಾರಿದರು. ಗ್ಯಾರಂಟಿ ಯೋಜನೆಗಳ ಬದಲು ಬೆಳೆ ಸಾಲ ಮನ್ನಾ ಮಾಡುವುದು. ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ನೀಡಿರುವುದು ಮಹಿಳೆಯರಿಗೆ ಉಪಯೋಗವಾಗುತ್ತಿಲ್ಲ, ಗ್ಯಾರಂಟಿ ಯೋಜನೆಗಳಿಂದ ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು. ನಂತರ ಬರ ಅಧ್ಯಯನ ತಂಡ ಲಕ್ಷ್ಮೇಶ್ವರದ ಇಟ್ಟಿಗೇರಿ ಕೆರೆಗೆ ಭೇಟಿ ನೀಡಿದಾಗ ಇಟ್ಟಿಗೇರಿ ಕೆರೆ ಬರಿದಾಗಿದ್ದು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯಯಾಗುತ್ತಿದ್ದು, ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಕಾರ್ಯ ಮಾಡಯಬೇಕು ಎಂದು ರೈತರು ಮನವಿ ಮಾಡಿದರು, ಅಲ್ಲಿಂದ ದೊಡ್ಡೂರ ರಸ್ತೆಯಲ್ಲಿರುವ ಶೇಂಗಾ ಹೊಲಕ್ಕೆ ಭೇಟಿ ನೀಡಿ ಶೇಂಗಾ ಬೆಳೆಯ ಪರಿಶೀಲನೆ ಮಾಡಿದರು. ಈ ವೇಳೆ ಪ್ರಗತಿಪರ ರೈತರಾದ ಮಹೇಶ ಹೊಗೆಸೊಪ್ಪಿನ ಹಾಗೂ ಬಸಣ್ಣ ಬೆಂಡಿಗೇರಿ ಅವರು ಬರ ಅಧ್ಯಯನ ತಂಡದೊಂದಿಗೆ ಮಾತನಾಡಿ, ಬರ ಅಧ್ಯಯನ ತಂಡವು ನೈಜ ವರದಿಯನ್ನು ನೀಡುವ ಮೂಲಕ ರೈತರ ರಕ್ಷಣೆ ಮಾಡುವ ಕಾರ್ಯ ಮಾಡಬೇಕು ತಮ್ಮ ಅಳಲು ತೋಡಿಕೊಂಡರು. ಎಂ.ಎಲ್, ತಹಸೀಲ್ದಾರ್ ಆನಂದ ಶೀಲ್ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು. ಬರ ಅಧ್ಯಯನ ತಂಡವು ದೊಡ್ಡೂರ, ಸೂರಣಗಿ, ಚಿಕ್ಕಸವನೂರ ಮಾರ್ಗವಾಗಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಭಾಗಗಳಿಗೆ ತೆರಳಿತು.