ಸಾರಾಂಶ
ಶಿವಮೊಗ್ಗ: ಪ್ರತಿಯೊಬ್ಬ ಆಹಾರ ಉದ್ದಿಮೆದಾರರು ಮಾರಾಟ ಮಾಡುವ ಕ್ಷೇತ್ರದಲ್ಲಿ ಹಾಗೂ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪರವಾನಗಿ ಪತ್ರ ಪಡೆದುಕೊಂಡು ಉದ್ಯಮ ನಡೆಸಬೇಕು ಎಂದು ತಹಸೀಲ್ದಾರ್ ಲಿಂಗರಾಜ್ ಹೇಳಿದರು.ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ, ಗ್ಲೋಬಲ್ ಇನ್‌ಸ್ಟಿಟ್ಯೂಟ್ ಎಜುಕೇಷನ್ ಅಂಡ್ ರಿಸರ್ಚ್ ಫೌಂಡೇಶನ್, ಶಿವಮೊಗ್ಗ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸಾಕಷ್ಟು ಜನ ಬೀದಿ ಬದಿಯ ವ್ಯಾಪಾರಸ್ಥರು ಇದ್ದು, ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ತಿಳಿಸಿದರು.ಮಹಾನಗರ ಪಾಲಿಕೆಯ ಸಮುದಾಯ ವ್ಯವಹಾರಿಕ ಅಧಿಕಾರಿ ಟಿ.ಆರ್.ಅನುಪಮಾ ಮಾತನಾಡಿ, ಪಾಲಿಕೆ ಮತ್ತು ಇಲಾಖೆಯಿಂದ ನೀಡುವ ಪರವಾನಗಿ ಪತ್ರವನ್ನು ವ್ಯಾಪಾರದ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು ಹಾಗೂ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದ ಅವರು, ನಾವು ಬಳಸುವ ಪದಾರ್ಥಗಳು ಉತ್ತಮ ಗುಣಮಟ್ಟ ಇರುವುದರ ಜೊತೆಗೆ ನಾವು ಆಹಾರ ಪದಾರ್ಥವನ್ನು ತಯಾರು ಮಾಡುವ ಸ್ಥಳಗಳು ಸ್ವಚ್ಛತೆಯಿಂದ ಇರಬೇಕು ಎಂದರು.ಮಥುರಾ ಫುಡ್ ಪ್ರೊಡಕ್ಟ್ ಸಂಸ್ಥಾಪಕಿ ಡಾ.ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಗ್ರಾಹಕರ ಆರೋಗ್ಯವನ್ನು ಕಾಪಾಡುವ ಕಾಯಕ ನಮ್ಮದು. ಗುಣಮಟ್ಟದ ನೀರು, ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಇಂತಹ ಕಾರ್ಯಾಗಾರಗಳು ಕೇವಲ ಪರವಾನಗಿ ಪತ್ರಕ್ಕೆ ಮಾತ್ರ ಸೀಮಿತವಾಗದೆ ಪ್ರತಿಯೊಂದು ಅಂಶವನ್ನು ಗಣನೆಗೆ ತೆಗೆದುಕೊಂಡು ಕಡ್ಡಾಯವಾಗಿ ನಾವುಗಳು ಪಾಲನೆ ಮಾಡಬೇಕು ಎಂದರು.ನಾಗರಿಕ ಹೋರಾಟ ಸಮಿತಿಯ ಎಸ್.ಬಿ.ಅಶೋಕ್ ಮಾತನಾಡಿ, ಆಹಾರ ತಯಾರಿಸುವಾಗ ಸ್ವಚ್ಛ ಪರಿಸರ ಹೊಂದಿರಬೇಕು ಎಂದರು.
ಜಗಜ್ಯೋತಿ ಬಸವೇಶ್ವರ ಮಹಿಳಾ ಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷೆ ಡಾ.ನಾಗರತ್ನ, ಜಿಲ್ಲಾ ಸಂಯೋಜನಾಧಿಕಾರಿ ಬಿ.ಟಿ.ಹನುಮಂತಯ್ಯ, ಆಹಾರ ಸುರಕ್ಷತೆ ಮತ್ತು ಪ್ರಮಾಣ ಪತ್ರ ಕೇಂದ್ರ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಮಣಿ ಗೌಡರ್, ಎಂ.ದಿನೇಶ್ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉದ್ದಿಮೆದಾರರು ಉಪಸ್ಥಿತರಿದ್ದರು.