ಸಾರಾಂಶ
ಬೆಂಗಳೂರು : ಇಲ್ಲಿನ ವಿಜಯನಗರದ ಫುಡ್ ಸ್ಟ್ರೀಟ್‌ನಲ್ಲಿ ಆಹಾರ ತಯಾರಕ ಅಂಗಡಿ, ಮಳಿಗೆಗಳ ಮೇಲೆ ಆಹಾರ ಸುರಕ್ಷತಾ ನಿಗಮದ ಅಧಿಕಾರಿಗಳು ದಾಳಿ ನಡೆಸಿ ಸ್ವಚ್ಛತೆ ಪರಿಶೀಲಿಸಿದರು.
ಆಹಾರ ಸುರಕ್ಷತಾ ನಿಗಮದ ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ರಾತ್ರಿ ಗೋಬಿ, ಫ್ರೈಡ್ ರೈಸ್, ದೋಸೆ, ನೂಡಲ್ಸ್ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದರು.
ಕೆಲ ದಿನಗಳ ಹಿಂದೆ ಸಾರ್ವಜನಿಕರು ನೀಡಿದ ದೂರು ಆಧರಿಸಿ ದಾಳಿ ನಡೆಸಿದ್ದು, ಗೋಬಿ, ನೂಡಲ್ಸ್ ತಯಾರಿಕೆಗೆ ಬಳಸುವ ಸಾಸ್, ಮಸಾಲೆಗಳು, ಪಾತ್ರೆ, ಅಂಗಡಿ ಸುತ್ತಮುತ್ತಲ ಸ್ವಚ್ಛತೆ, ಕುಡಿಯುವ ನೀರು ಇತ್ಯಾದಿಗಳನ್ನು ಪರಿಶೀಲಿಸಿದರು. ನಂತರ ಗುಣಮಟ್ಟದ ಆಹಾರದೊಂದಿಗೆ ಶುದ್ಧ ಕುಡಿಯುವ ನೀರು ಕೊಡಬೇಕು. ಅಂಗಡಿ, ಮಳಿಗೆಗಳ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಗುಣಮಟ್ಟದ ಆಹಾರ ನೀಡದಿದ್ದರೆ, ಇಲ್ಲವೇ ಹಾನಿಕಾರ ಬಣ್ಣಗಳನ್ನು ಆಹಾರದಲ್ಲಿ ಬಳಸಿದರೆ, ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು. ಪರವಾನಗಿಯನ್ನು ಕೂಡ ರದ್ದು ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.