ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಊಟ ಇಲ್ಲದೆ ಪರದಾಟ

| Published : May 13 2024, 12:03 AM IST

ಸಾರಾಂಶ

ಆಸ್ಪತ್ರೆಯಲ್ಲಿ ಒಳ ರೋಗಿಗಳಿಗಿಲ್ಲಾ ತಿಂಡಿ, ಊಟದ ವ್ಯವಸ್ಥೆ. ಚಿತ್ತಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಡಳಿತಾಧಿಕಾರಿಗಳು ಒಳ ರೋಗಿಗಳಿಗೆ ಊಟ, ತಿಂಡಿ ನೀಡದೇ ಇರುವದರಿಂದ ಚಿಕಿತ್ಸೆಗೆಂದು ಬರುವ ಬಾಣಂತಿಯರು ಊಟಕ್ಕಾಗಿ ಅವರ ಪೋಷಕರು ಹೆಚ್ಚಿನ ಹಣ ನೀಡಿ ಹೊಟೇಲ್ ಊಟಕ್ಕೆ ಮೊರೆ ಹೋಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವವರು ಬಹಳಷ್ಟು ಜನರು ಕಡು ಬಡವರಾಗಿರುತ್ತಾರೆ. ತಾಲೂಕಿನ ದೂರ ದೂರದ ಊರುಗಳಿಂದ ಬರುತ್ತಾರೆ. ಅವರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರವು ಲಕ್ಷಾಂತರ ಹಣವನ್ನು ಖರ್ಚು ಮಾಡಿ ಅಂತಹವರಿಗೆ ಉಚಿತವಾಗಿ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಮತ್ತು ಸಾಯಂಕಾಲ ಊಟದ ವ್ಯವಸ್ಥೆಯನ್ನು ಮಾಡಿ ಬಾಣಂತಿಯರಿಗೆ ಅನುಕೂಲ ಮಾಡಿಕೊಟ್ಟಿದ್ದ ಸಾಕಷ್ಟು ಬಡವರಿಗೆ ಇದರಿಂದ ತುಂಬಾ ಅನುಕೂಲವಾಗುತ್ತಿದೆ. ಆದರೆ ಚಿತ್ತಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಡಳಿತಾಧಿಕಾರಿಗಳು ಒಳ ರೋಗಿಗಳಿಗೆ ಊಟ, ತಿಂಡಿ ನೀಡದೇ ಇರುವುದರಿಂದ ಚಿಕಿತ್ಸೆಗೆಂದು ಬರುವ ಬಾಣಂತಿಯರು ಊಟಕ್ಕಾಗಿ ಅವರ ಪೋಷಕರು ಹೆಚ್ಚಿನ ಹಣ ನೀಡಿ ಹೊಟೇಲ್ ಊಟಕ್ಕೆ ಮೊರೆ ಹೋಗಬೇಕಾಗಿದೆ.

ಚಿತ್ತಾಪುರ ಮತಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯಿತಿ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆರವರು ಕ್ಷೇತ್ರದ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯ ವೈದ್ಯರು, ೧೦೦ ಬೆಡ್‌ಗಳು ಹಾಗೂ ಎಕ್ಸರೆ, ಡಯಾಲಿಸಿಸ್, ಐಸಿಯೂದಂತಹ ವಿಶೇಷ ಸೌಲಭ್ಯಗಳು ತಾಲೂಕು ಕೇಂದ್ರದಲ್ಲಿ ಬಡಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೀಗಾಗಿ ಬಹಳಷ್ಟು ಜನರು ಚಿಕಿತ್ಸೆಗಾಗಿ, ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ.

ಶಸ್ತ್ರ ಚಿಕಿತ್ಸೆಗೆ ಬರುವ ಬಾಣಂತಿಯರು ೭ ದಿನಗಳಾದರೂ ಆಸ್ಪತ್ರೆಯಲ್ಲಿ ಇರಬೇಕು. ಇಂತಹ ಸಮಯದಲ್ಲಿ ದೂರದಿಂದ ಬಂದಿರುವವರಿಗೆ ಊಟದ ಅನಾನೂಕೂಲತೆ ಉಂಟಾಗುತ್ತಿದೆ. ಮೊದಲೆಲ್ಲಾ ಆಸ್ಪತ್ರೆಯಲ್ಲಿ ಊಟ ಕೊಡುತ್ತಾರೆ ಎನ್ನುವ ಧೈರ್ಯದಿಂದ ನಾವು ಹಾಗೆ ಬಂದಿದ್ದೇವೆ. ಇಲ್ಲಿ ನೋಡಿದರೆ ಊಟ ನೀಡುತ್ತಿಲ್ಲ. ಈ ಕುರಿತಾಗಿ ತಾಲೂಕು ಆಸ್ಪತ್ರೆಯ ಆಡಳಿತಾಧಾರಿಕಾರಿಯಾಗಿರುವ ವೈದ್ಯರಾದ ಮೋಬಾಶಿರ್ ಅವರಿಗೆ ಕೇಳಿದರೆ ಅವರು ನೀಡುವ ಉತ್ತರ ನಾನೇ ಬೆಳಗ್ಗೆಯಿಂದ ತಿಂಡಿಯನ್ನು ತಿಂದಿಲ್ಲ. ಇನ್ನು ನಿಮಗೆಲ್ಲಿ ಕೊಡಬೇಕು ಎಂದು ಉತ್ತರ ನೀಡಿದರಿ. ಅಲ್ಲದೇ ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗಳನ್ನು ಕೇಳಿ ಎಂದು ಜವಬ್ದಾರಿ ಸ್ಥಾನದಲ್ಲಿದ್ದು ಬೇಜವಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇವರು ಹೇಳುವುದು ಕೇಳಿದರೆ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಸರ್ಕಾರ ನೀಡಿದ ಸೌಲಭ್ಯ ಬಡವರಿಗೆ ನೀಡುವುದಕ್ಕೆ ಇವರಿಗೆ ಅಲರ್ಜಿಯಾಗಿದೆ ಎನ್ನುತ್ತಾರೆ. ಶಸ್ತ್ರಚಿಕಿತ್ಸೆಗೆ ಬಂದಿರುವ ಮಹಿಳೆಯ ಸಂಬಂಧಿಕ ಖಾಸಿಂ ಅಲಿ ಆರೋಪಿಸುತ್ತಾರೆ.

ಸಂಬಂಧಿಸಿದ ಅಧಿಕಾರಿಗಳು ಈ ವಿಷಯದ ಕುರಿತು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಆಗುತ್ತಿರುವ ತೊಂದರೆ ಕಂಡು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಜನರ ಒತ್ತಾಯವಾಗಿದೆ.ನಾನು ಕಳೆದ ನಾಲ್ಕು ದಿನದ ಹಿಂದೆ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ನನಗೆ ಇಲ್ಲಿವರೆಗೆ ಆಸ್ಪತ್ರೆಯಿಂದ ತಿಂಡಿ ಊಟ ನೀಡಿಲ್ಲ. ಒಬ್ಬಂಟಿಯಾಗಿರುವ ನಮ್ಮ ಮನೆಯವರು ದಿನಾಲೂ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ನನಗೆ ಊರಿನಿಂದ ಊಟ ತಂದು ಕೊಡುತ್ತಿದ್ದಾರೆ. ಹೀಗಾಗಿ ಸರಿಯಾದ ಸಮಯಕ್ಕೆ ಊಟ ಆಗದೇ ಆರೋಗ್ಯದಲ್ಲಿ ಏರು ಪೇರಾಗುತ್ತಿದೆ.

- ಮುಡಬೂಳ ಗ್ರಾಮದ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ