ಸಾರಾಂಶ
ಶಿರಸಿ: ಸೋಂದಾ ಸ್ವರ್ಣವಲ್ಲೀಯ ಯತಿದ್ವಯರ ಚಾತುರ್ಮಾಸ್ಯದ ನಿಮಿತ್ತ ಶಿರಸಿಯ ನಗರ ಭಾಗ, ಕಾರವಾರ ಹಾಗೂ ಮೈಸೂರು ಸೀಮಾ ಪರಿಷತ್ತಿನ ಶಿಷ್ಯರು ಸೇವೆ ಸಲ್ಲಿಸಿದರು.
ಗಂಗಾಧರೇಂದ್ರ ಸರಸ್ವತೀ ಶ್ರೀ ಹಾಗೂ ಆನಂದಬೋಧೇಂದ್ರ ಸರಸ್ವತೀ ಶ್ರೀ ಪಾದುಕಾ ಪೂಜೆ, ಭಿಕ್ಷಾ ಸೇವೆಯನ್ನು ಸ್ವೀಕರಿಸಿದರು.ಬಳಿಕ ಆಶೀರ್ವಚನ ನೀಡಿದ ಗಂಗಾಧರೇಂದ್ರ ಸರಸ್ವತೀ ಶ್ರೀ, ಎಲ್ಲರಿಗೂ ದೀರ್ಘವಾದ ಆಯುಷ್ಯ ಬೇಕು ಎನ್ನುವ ಅಪೇಕ್ಷೆ ಇರುತ್ತದೆ. ಈ ಅಪೇಕ್ಷೆ ಒಂದು ದೃಷ್ಟಿಯಿಂದ ತಪ್ಪೇನು ಅಲ್ಲ. ಪ್ರತಿದಿನ ದೇವರಲ್ಲಿ ನಾವು ಪ್ರಾರ್ಥಿಸಿಕೊಳ್ಳುತ್ತೇವೆ. ಇಷ್ಟಲ್ಲದೇ ಬೇರೆ ಬೇರೆ ಪ್ರಯತ್ನ ಮಾಡುತ್ತೇವೆ. ಇದು ಶಾಸ್ತ್ರ ಸಮ್ಮತಿ ಇರುವ ವಿಷಯವೇ ಆಗಿದೆ. ಮನುಷ್ಯನ ಆಯುಷ್ಯ ನೂರು ವರ್ಷ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ಆದರೆ ಈ ಆಯುಷ್ಯಕ್ಕೆ ಕತ್ತರಿ ಹಾಕುವವರು ಯಾರು? ಈ ರೀತಿಯಲ್ಲಿ ಆಯುಷ್ಯ ಕಡಿಮೆಯಾಗಲು ಕಾರಣವೇನು? ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಮಹಾಭಾರತದಲ್ಲಿ ಧೃತರಾಷ್ಟ್ರ ವಿಧುರನ ಬಳಿ ಕೇಳುತ್ತಾನೆ. ವಿಧುರ ದೊಡ್ಡ ಜ್ಞಾನಿ. ಅವನ ಬಳಿ ಅನೇಕ ವಿಷಯಗಳನ್ನು ಕೇಳುತ್ತಾನೆ. ಅದರಲ್ಲಿ ಮನುಷ್ಯನ ಆಯುಷ್ಯಕ್ಕೆ ಕತ್ತರಿ ಹಾಕುವವರು ಯಾರು ಎಂಬ ವಿಷಯವು ಒಂದು. ಅದಕ್ಕೆ ವಿಧುರನ ಉತ್ತರ ವಿವರಿಸಿ ಮಾತನಾಡಿದರು.
ದೀರ್ಘ ಆಯುಷ್ಯಕ್ಕೆ ಆರು ವೈರಿಗಳಿವೆ. ಅವು ಅತೀ ಅಹಂಕಾರ ಪಡುವುದು, ಅತೀ ವಾದ, ದಾನ ಮಾಡದಿರುವುದು, ಸಿಟ್ಟು, ಸ್ವಾರ್ಥ, ಮಿತ್ರ ದ್ರೋಹ ಇವು ನಮ್ಮ ಆಯಸ್ಸನ್ನು ಕಮ್ಮಿ ಮಾಡುತ್ತವೆ. ಇವುಗಳನ್ನು ಬಿಡುವ ಪ್ರಯತ್ನ ಮಾಡಬೇಕು. ಅತಿಯಾದ ಅಭಿಮಾನವನ್ನು ಪ್ರಯತ್ನ ಹಾಕಿ ಕಡಿಮೆ ಮಾಡಿಕೊಳ್ಳುತ್ತಾ ಹೋಗಬೇಕು. ಇದರಿಂದ ಅಮಾನಿತ್ವ ಎಂಬ ಒಳ್ಳೆಯ ಗುಣ ಬರುತ್ತದೆ. ಇದು ನಮ್ಮನ್ನು ಸದ್ಗತಿಗೆ ಕರೆದುಕೊಂಡು ಹೋಗುವ ಮೊದಲ ಗುಣ ಎಂದರು.ಈ ಎಲ್ಲ ಆಯುಷ್ಯಕ್ಕೆ ಕತ್ತರಿ ಹಾಕುವ ಆರು ವೈರಿಗಳನ್ನು ನಾಶಮಾಡಿಕೊಳ್ಳುವ ಉಪಾಯವೆಂದರೆ ದೇವರಲ್ಲಿ ಭಕ್ತಿ, ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು. ಇದರಿಂದ ತಾನಾಗಿಯೇ ಕಡಿಮೆಯಾಗುತ್ತದೆ. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವ ಅಭ್ಯಾಸ ಮಾಡಿಕೊಂಡರೆ ಆಯಸ್ಸು ವೃದ್ಧಿಯಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಮನಸ್ಸಿನಲ್ಲಿ, ಶರೀರದಲ್ಲಿ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ. ಆ ಒಳ್ಳೆಯ ಪರಿಣಾಮದಿಂದಾಗಿ ಆಯುಷ್ಯವು ವೃದ್ಧಿಯಾಗುತ್ತದೆ. ಇನ್ನೊಂದು ಉಪಾಯವೆಂದರೆ ಗೋವಿನ ಘೃತವನ್ನು ನಿತ್ಯವೂ ನಿಯಮಿತವಾಗಿ ಸೇವಿಸುವುದು. ಇದು ದೀರ್ಘ ಕಾಲ ಇರುವ ಸೂಕ್ಮವಾದ ಅವಯವಗಳನ್ನು ನಮ್ಮ ಶರೀರದಲ್ಲಿ ಹೆಚ್ಚಿಸುತ್ತದೆ ಎಂದರು.
ಆಹಾರವನ್ನು ಪ್ರತಿದಿನ ಮಿತವಾಗಿ ಬಳಕೆ ಮಾಡಬೇಕು. ನಿಯಮಿತವಾಗಿ ಸೇವಿಸುವುದರಿಂದ ಅನೇಕ ಒಳ್ಳೆಯ ಪ್ರಯೋಜನಗಳನ್ನು ಕಾಣಬಹುದು. ಸಾತ್ವಿಕ ಆಹಾರವಾದ ತುಪ್ಪದ ಸೇವನೆಯು ಅನೇಕ ಸೂಕ್ಷ್ಮವಾದ ಧಾತುಗಳನ್ನು ವೃದ್ಧಿಸುತ್ತದೆ ಎಂದರು.ಈ ವೇಳೆ ದಾಮೋದರ ಭಟ್ಟ, ಚಂದ್ರಶೇಖರ ಹೆಗಡೆ, ಕೆ.ವಿ. ಭಟ್ಟ, ಮಂಜುನಾಥ ಹೆಗಡೆ, ಎಸ್.ಪಿ. ಭಟ್ಟ, ಆರ್.ಜಿ. ಹೆಗಡೆ ಇದ್ದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ೯೫ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀಗಳು ನೀಡಿದರು. ಮಹನೀಯರು ಗಾಯತ್ರಿ ಜಪಾನುಷ್ಠಾನ, ಮಾತೆಯರು ಶಂಕರಸ್ತೋತ್ರ ಪಠಣ, ಲಲಿತಾ ಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿದರು.