ಕಾಲುಬಾಯಿ, ಲಂಪಿಸ್ಕಿನ್: ಏಕಕಾಲದಲ್ಲಿ ಲಸಿಕಾ ಅಭಿಯಾನ

| Published : May 02 2025, 12:14 AM IST

ಸಾರಾಂಶ

ಜಾನುವಾರುಗಳಿಗೆ ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗದ ಲಸಿಕಾ ಅಭಿಯಾನ ಈಗಾಗಲೇ ಪ್ರಾರಂಭಗೊಂಡಿದೆ.

ಶಿರಸಿ: ಜಾನುವಾರುಗಳಿಗೆ ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗದ ಲಸಿಕಾ ಅಭಿಯಾನ ಈಗಾಗಲೇ ಪ್ರಾರಂಭಗೊಂಡಿದ್ದು, ಒಂದೇ ಸಮಯಕ್ಕೆ ಎರಡು ಲಸಿಕೆ ನೀಡುವ ಬಗ್ಗೆ ರೈತರಲ್ಲಿ ಕೆಲ ಅನುಮಾನ, ಆತಂಕದ ಬಗ್ಗೆ ಪಶು ವೈದ್ಯರು ಪ್ರತಿಕ್ರಿಯಿಸಿ ಯಾವುದೇ ಅಪಾಯವಾಗದು. ಲಸಿಕೆ ಹಾಕಿಸಲು ಸಹಕರಿಸಿ ಎಂಬ ಸಲಹೆ ನೀಡಿದ್ದಾರೆ.

ದನ-ಕರುಗಳ ಪ್ರಾಣಕ್ಕೆ ಕಂಟಕ ತರಬಹುದಾದ ವೈರಸ್‌ಗಳ ಸೋಂಕಿನಿಂದ ಉಂಟಾಗುವ ಈ ರೋಗಗಳ ನಿಯಂತ್ರಣವು ಪಶು ಸಂಗೋಪನಾ ಇಲಾಖೆಗೆ ಸವಾಲಾಗುತ್ತಿದ್ದು, ೨ ವರ್ಷಗಳ ಹಿಂದೆ ಚರ್ಮಗಂಟು ರೋಗ ಜಾನುವಾರುಗಳಿಗೆ ವಿಪರೀತವಾಗಿ ಕಾಡಿತ್ತು. ಕಾಲುಬಾಯಿ ರೋಗವೂ ಅನೇಕ ಜಾನುವಾರುಗಳ ಪ್ರಾಣ ತೆಗೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಮುಂಜಾಗ್ರತಾ ಕ್ರಮವಾಗಿ ಏ.೨೬ರಿಂದ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ೪೫ ದಿನಗಳ ವರೆಗೆ ಈ ಅಭಿಯಾನ ಮುಂದುವರೆಯಲಿದ್ದು, ಈವರೆಗೆ ಶಿರಸಿ ತಾಲೂಕಿನಲ್ಲಿ ೧,೭೦೦ ಚರ್ಮಗಂಟು ರೋಗ ಲಸಿಕೆ, ೩,೨೦೦ ಕಾಲುಬಾಯಿ ಲಸಿಕೆಗಳನ್ನು ಹಾಕಲಾಗಿದೆ.

ಕಾಲುಬಾಯಿ ರೋಗವು ಅಪ್ತೋವೈರಸ್ ಎಂಬ ವೈರಸ್‌ನಿಂದ ಹರಡುತ್ತದೆ. ದನ, ಎಮ್ಮೆಗಳ ಕಾಲು ಮತ್ತು ಬಾಯಿಗೆ ಹುಣ್ಣುಗಳಾಗಿ ಸೊರಗ ತೊಡಗುತ್ತವೆ. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಅಂತಿಮ ಹಂತದಲ್ಲಿ ಜಾನುವಾರುಗಳು ಸಾವನ್ನಪ್ಪಬಹುದು. ಕ್ಯಾಪ್ರಿಫಾಕ್ಸ್ ಎಂಬ ವೈರಸ್ ಪ್ರಭೇದದ ಲಂಪಿಸ್ಕಿನ್ ವೈರಸ್‌ನಿಂದ ಚರ್ಮಗಂಡು ರೋಗ ಹರಡುತ್ತದೆ. ಇದು ಆಕಳು, ಎತ್ತುಗಳಿಗೆ ಮಾತ್ರ ಬರುವ ರೋಗ. ಎಮ್ಮೆಗಳಿಗೆ ಈ ರೋಗ ಹರಡುವುದಿಲ್ಲ. ಈ ರೋಗಕ್ಕೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸದಿದ್ದರೆ ಸಾವನ್ನಪ್ಪುತ್ತವೆ. ಈ ಎರಡು ರೋಗ ಸೋಂಕಿನ ರೋಗಗಳಾಗಿದ್ದು, ಕಾಲು ಬಾಯಿ ರೋಗ ತಗುಲಿದ ಜಾನುವಾರುಗಳ ಕಾಲು ಮತ್ತು ಬಾಯಿಯ ಹುಣ್ಣಿನಿಂದ ಸೋರುವ ಜೊಲ್ಲು ಮೇವಿನ ಮೇಲೆ ಬಿಳುವ ಸಾಧ್ಯತೆ ಇರುತ್ತದೆ. ಈ ಜೊಲ್ಲು ತಾಗಿದ ಮೇವನ್ನು ಬೇರೆ ಜಾನುವಾರುಗಳು ತಿಂದಾಗ ಅವುಗಳಿಗೂ ರೋಗ ಹರಡುತ್ತವೆ. ರೋಗ ತಗುಲಿದ ಜಾನುವಾರುಗಳನ್ನು ಇತರ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ದೂರದಲ್ಲಿ ಕಟ್ಟಬೇಕು. ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ರೋಗದ ಲಕ್ಷಣ ಕಂಡುಬಂದರೆ ಪಶು ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ವಿವರಿಸಿದರು.

ಎರಡೂ ಲಸಿಕೆ ನೀಡಿದರೆ ಅಪಾಯವಿಲ್ಲ:

ಚರ್ಮಗಂಟು ಮತ್ತು ಕಾಲುಬಾಯಿ ರೋಗದ ಲಸಿಕೆ ಏಕಕಾಲದಲ್ಲಿ ನೀಡಿದರೆ ಜಾನುವಾರುಗಳಿಗೆ ಅಪಾಯವಾಗುತ್ತದೆ ಎಂಬ ಭ್ರಮೆ ಕೆಲ ರೈತರಲ್ಲಿತ್ತು. ಕೆಲ ಭಾಗಗಳಲ್ಲಿ ಲಸಿಕೆ ನೀಡುವುದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಆಗ ಇಲಾಖೆ ವತಿಯಿಂದ ರೈತರಿಗೆ ಸೂಕ್ತ ಮಹಿತಿ ಮತ್ತು ಮಾರ್ಗದರ್ಶನ ನೀಡಿದಾಗ ಒಪ್ಪಿಗೆ ಸೂಚಿಸಿದ್ದಾರೆ. ಎರಡೂ ಲಸಿಕೆಯನ್ನು ನೀಡಿದರೆ ಜಾನುವಾರುಗಳಿಗೆ ಯಾವುದೇ ಅಪಾಯವಿಲ್ಲ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.