ಧಾರವಾಡ ಜಿಲ್ಲೆಯಲ್ಲಿ 9ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಹಾಕಬೇಕಿದ್ದು, ಜಿಲ್ಲೆಯಲ್ಲಿ 116 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬರು ಮೇಲ್ವಿಚಾರಕರು ಹಾಗೂ ಇಬ್ಬರು ಲಸಿಕದಾರರು ಇರುತ್ತಾರೆ.

ಧಾರವಾಡ:

ಜಿಲ್ಲೆಯಲ್ಲಿ ಏ. 23ರಿಂದ ಮೇ 22ರ ವರೆಗೆ ಜಿಲ್ಲೆಯ ಎಲ್ಲ ದನ ಹಾಗೂ ಎಮ್ಮೆಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಲಾಗುವುದು. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಮನೆ ಬಾಗಲಿಗೆ ಬಂದು ಲಸಿಕೆ ಹಾಕಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ 9ನೇ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, 9ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಹಾಕಬೇಕಿದ್ದು, ಜಿಲ್ಲೆಯಲ್ಲಿ 116 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬರು ಮೇಲ್ವಿಚಾರಕರು ಹಾಗೂ ಇಬ್ಬರು ಲಸಿಕದಾರರು ಇರುತ್ತಾರೆ. ಜಿಲ್ಲೆಯ 1,36,865 ದನ ಹಾಗೂ 47,172 ಎಮ್ಮೆಗಳನ್ನು ಲಸಿಕಾಕರಣಕ್ಕೆ ಒಳಪಡಿಸಲಾಗುವುದು. ಜಿಲ್ಲೆಯಲ್ಲಿ ಪ್ರತಿ 100 ಜಾನುವಾರಗಳಿಗೆ ಒಂದು ಬ್ಲಾಕ್‌ನಂತೆ, 1854 ಬ್ಲಾಕ್‌ ಮಾಡಲಾಗಿದೆ. ಲಸಿಕಾ ಅಭಿಯಾನದ ನಂತರ, ಅಭಿಯಾನದಲ್ಲಿ ಬಿಟ್ಟು ಹೋಗಿರುವ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು ಎಂದರು. ಈ ಯೋಜನೆ ಅಡಿ 2030ರೊಳಗಾಗಿ ದೇಶವನ್ನು ಕಾಲುಬಾಯಿ ಬೇನೆ ಮುಕ್ತಗೊಳಿಸಲು ಸಂಕಲ್ಪ ಮಾಡಲಾಗಿದೆ. ದೇಶದ ದನ, ಎಮ್ಮೆ ಕಾಲುಬಾಯಿ ಬೇನೆ ಮುಕ್ತವಾದಲ್ಲಿ, ಜಾನುವಾರುಗಳ ಉತ್ಪನ್ನ ಹೆಚ್ಚಿಸಿ, ರೈತರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು. ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಶೇ.100ರಷ್ಟು ಗುರಿ ಸಾಧಿಸಲು ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಸ್.ವಿ. ಸಂತಿ, ತಾಲೂಕುಗಳ ಮುಖ್ಯ ಪಶುವೈಧ್ಯಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರು ಇದ್ದರು.