50ಕ್ಕೂ ಹೆಚ್ಚು ಮಕ್ಕಳು ತಮ್ಮ ತಾಯಿಯ ಪಾದಪೂಜೆ ಮಾಡಿ ಗೌರವ ಸಲ್ಲಿಸಿದರು. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳು ತಮ್ಮ ತಾಯಿ ಕಾಲು ತೊಳೆದು, ವಿಭೂತಿ, ಕುಂಕುಮ ಹಚ್ಚಿ, ಹೂ ಏರಿಸಿ, ಉದ್ದಿನಕಡ್ಡಿ ಬೆಳಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಧಾರವಾಡ:

ಪ್ರತಿಯೊಬ್ಬರಿಗೂ ತಾಯಿಯೇ ದೇವರು. ಅವಳು ಪ್ರೀತಿ, ತ್ಯಾಗ ಮತ್ತು ನಿಸ್ವಾರ್ಥತೆಯ ಸಾಕಾರಮೂರ್ತಿ. ಮಗುವಿನ ಮೊದಲ ಗುರು, ಮಾರ್ಗದರ್ಶಕಿ ತಾಯಿ. ಅಂತಹ ತಾಯಿಗೆ ಗೌರವ ನೀಡುವ ನಿಟ್ಟಿನಲ್ಲಿ ಕಲಾಶಕ್ತಿ ಫೌಂಡೇಶನ್‌ ತನ್ನ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಆಯೋಜಿಸಿದ್ದ ತಾಯಿ ದಿನಾಚರಣೆ ಮತ್ತೊಬ್ಬರಿಗೆ ಮಾದರಿಯಾಯಿತು.

ಭಾನುವಾರ ಇಲ್ಲಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಭವನದಲ್ಲಿ 50ಕ್ಕೂ ಹೆಚ್ಚು ಮಕ್ಕಳು ತಮ್ಮ ತಾಯಿಯ ಪಾದಪೂಜೆ ಮಾಡಿ ಗೌರವ ಸಲ್ಲಿಸಿದರು. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳು ತಮ್ಮ ತಾಯಿ ಕಾಲು ತೊಳೆದು, ವಿಭೂತಿ, ಕುಂಕುಮ ಹಚ್ಚಿ, ಹೂ ಏರಿಸಿ, ಉದ್ದಿನಕಡ್ಡಿ ಬೆಳಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ಕಾರ್ಯಕ್ಕೆ ಜೆಎಸ್‌ಎಸ್‌ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಮೇಯರ್‌ ಜ್ಯೋತಿ ಪಾಟೀಲ, ಶೀಲಾ ಅಂಚಟಗೇರಿ ಹಾಗೂ ಅನ್ನಪೂರ್ಣಾ ಪಾಟೀಲ ಚಾಲನೆ ನೀಡಿದರು.

ತಾಯಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ಅದರಲ್ಲೂ ಈಗಿನ ಯುವ ಜನಾಂಗ ತಾಯಿಗೆ ಗೌರವ ಕೊಡುವ ಸಂಸ್ಕಾರ ಮಕ್ಕಳು ಕಲಿಯಬೇಕು. ಈ ಕಾರ್ಯವನ್ನು ಕಲಾ ಶಕ್ತಿ ಫೌಂಡೇಶನ್‌ ಮಾಡುತ್ತಿದೆ ಎಂದ ಡಾ. ಅಜಿತ ಪ್ರಸಾದ, ಬೇಸಿಗೆ ಶಿಬಿರ ಬರೀ ಪಠ್ಯ ಮಾತ್ರವಲ್ಲದೇ, ಸಂಗೀತ, ಚಿತ್ರಕಲೆ, ವ್ಯಕ್ತಿತ್ವ ರೂಪಿಸುವುದು. ಪ್ರಮುಖವಾಗಿ ಮೊಬೈಲ್‌ ಚಟ ಬಿಡಿಸುವ ಸಲುವಾಗಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವಂತಾಗಿದೆ ಎಂದರು.

ಮಕ್ಕಳ ಮನಸ್ಸು ಮೃದುವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಉತ್ತಮ ಹವ್ಯಾಸ ಕಲಿಸಬೇಕು. ಇದು ಶಾಲೆಯಲ್ಲಿ ಆಗುವುದಿಲ್ಲ. ಆದ್ದರಿಂದ ಬೇಸಿಗೆ ರಜೆಯಲ್ಲಿ ಇಂತಹ ಶಿಬಿರಗಳ ಮೂಲಕ ಸಂಗೀತ, ನಾಟಕ ಹಾಗೂ ಇತರ ಚಟುವಟಿಕೆ ಮೂಲಕ ಮಕ್ಕಳಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಮೇಯರ್‌ ಜ್ಯೋತಿ ಪಾಟೀಲ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟಕ ಮಾರ್ತಾಂಡಪ್ಪ ಕತ್ತಿ ಮಾತನಾಡಿದರು. ಕಲಾಶಕ್ತಿ ಫೌಂಡೇಶನ್‌ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಕಲಾನಿಧಿ ಎಜುಕೇಶನ್‌ ಕಾರ್ಯದರ್ಶಿ ಶ್ರೀನಿವಾಸ್‌ ಇಂಚೂರ ಹಾಗೂ ಅಮೃತಾ ಪಾಟೀಲ ಇದ್ದರು. ಆನಂತರ ಮಕ್ಕಳಿಂದ ನೃತ್ಯ, ಹಾಡು ಕಾರ್ಯಕ್ರಮ ನಡೆದವು.