ಮಂಜುನಾಥ ಕೆ.ಎಂ.
ಬಳ್ಳಾರಿ: ಇಲ್ಲಿಯ ಮಹಾನಗರ ಎರಡು ಪ್ರಹಸನಕ್ಕೆ ಆಗಾಗ್ಗೆ ಸಾಕ್ಷಿಯಾಗುತ್ತದೆ. ಒಂದು ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ, ಮತ್ತೊಂದು ಅತ್ಯಂತ ಅಪಾಯಕಾರಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ದಿಢೀರ್ ಕಾಳಜಿಯ ದಾಳಿ ಪ್ರಕರಣ!ವರ್ಷಕ್ಕೊಮ್ಮೆ ಹೀಗೊಂದು ಕಾರ್ಯಾಚರಣೆಗೆ ಮುನ್ನುಗ್ಗುವ ಅಧಿಕಾರಿಗಳ ಭೀಮಬಲ ನಾಲ್ಕೈದು ದಿನಕ್ಕೆ ಕುಸಿದು ಬೀಳುತ್ತದೆ. ಎಂದಿನಂತೆಯೇ ಫುಟ್‌ಪಾತ್‌ನಲ್ಲಿ ಅಂಗಡಿಗಳು ತೆರೆದುಕೊಳ್ಳುತ್ತವೆ. ಪ್ಲಾಸ್ಟಿಕ್ ಬಳಕೆಯ ಸಾಂಗವಾಗಿ ಮುಂದುವರಿಯುತ್ತದೆ.
ಗಣಿ ಅತಿಕ್ರಮಣಕ್ಕೆ ಖ್ಯಾತಿ-ಕುಖ್ಯಾತಿಯನ್ನೂ ಪಡೆದಿರುವ ಬಳ್ಳಾರಿಯಲ್ಲಿ ಫುಟ್‌ಪಾತ್ ಅತಿಕ್ರಮಣವೂ ಒಂದು. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ನಿರ್ಮಿಸಿದ ಈ ನಡೆ ಪಥಗಳ ಅತಿಕ್ರಮಣದಿಂದಾಗಿ ನಿತ್ಯ ಹತ್ತಾರು ರಸ್ತೆ ಅಪಘಾತಗಳಿಗೆ ಪರೋಕ್ಷವಾಗಿ ಕಾರಣವಾಗಿವೆ. ನಿತ್ಯ ಹೆಚ್ಚುತ್ತಿರುವ ಅಪಘಾತಗಳಿಗೆ ಮಹಾನಗರ ಪಾಲಿಕೆಯೂ ಮಹತ್ವದ "ಕೊಡುಗೆ " ನೀಡುತ್ತಿದೆ!ಇನ್ನು ಕೆಲವೇ ದಿನಗಳಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುತ್ತೇವೆ. ಪ್ಲಾಸ್ಟಿಕ್ ಮುಕ್ತ ಬಳ್ಳಾರಿ ಮಾಡುತ್ತೇವೆ. ಈ ಸಂಬಂಧ ಈಗಾಗಲೇ ಸಭೆ ಮಾಡಿದ್ದೇವೆ ಎಂಬ ಹೇಳಿಕೆ ಮುಂದುವರಿಸಿಕೊಂಡು ಬಂದಿರುವ ಇಲ್ಲಿನ ಮಹಾನಗರ ಪಾಲಿಕೆ ಆಡಳಿತ, ಫುಟ್‌ಪಾತ್ ಅತಿಕ್ರಮಣಕಾರರನ್ನು ಸುರಕ್ಷಿತವಾಗಿ ಪೋಷಿಸಿಕೊಂಡು ಬರುತ್ತಿರುವುದು ಅಷ್ಟೇ ಸತ್ಯ.
ಪ್ಲಾಸ್ಟಿಕ್ ನಿಷೇಧ ವಿಷಯದಲ್ಲೂ ಇವರ ನಡೆ ಭಿನ್ನವಾಗಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಬಳ್ಳಾರಿಯಲ್ಲಿ ಅದು ಜಾರಿಯಾಗಿಲ್ಲ. ಬೀದಿಬದಿಯ ಹೋಟೆಲ್ ಸೇರಿದಂತೆ ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲೂ ಪ್ಲಾಸ್ಟಿಕ್ ಬಳಕೆ ನಿರಾತಂಕವಾಗಿ ಮುಂದುವರಿದಿದ್ದರೂ ನಿಯಂತ್ರಣದ ಕಾಳಜಿಯನ್ನು ಈ ವರೆಗೆ ಪಾಲಿಕೆ ತೆಗೆದುಕೊಂಡಿಲ್ಲ. ಪ್ರತಿಷ್ಠಿತರ ಜತೆಗೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಅನ್ಯೋನ್ಯ ಸಂಬಂಧ ಇರುವುದರಿಂದ ಪ್ಲಾಸ್ಟಿಕ್ ಬಳಕೆಯ ಕಡೆ ಕಣ್ಣು ಹಾಯಿಸುವ ಕಾಳಜಿ ಎಲ್ಲೂ ಕಂಡು ಬರುತ್ತಿಲ್ಲ ಎಂಬ ಸಾರ್ವಜನಿಕರ ಆರೋಪಗಳನ್ನು ಸಹ ಅಲ್ಲಗಳೆಯುವಂತಿಲ್ಲ. ಬೀದಿಯ ಬದಿಯ ಹೋಟೆಲ್‌ಗಳು ಪ್ಲಾಸ್ಟಿಕ್‌ನಲ್ಲಿ ಇಡ್ಲಿ ಬೇಯಿಸಿಕೊಟ್ಟರೂ ಕೇಳುವವರಿಲ್ಲ. ಪಾಲಿಕೆಗೇ ಸಡ್ಡು:
ಪಾದಚಾರಿ ರಸ್ತೆಯ ಅತಿಕ್ರಮಣದ ಪರಾಕಾಷ್ಠೆಯನ್ನು ಕಣ್ತುಂಬಿಕೊಳ್ಳಬೇಕು ಎಂದಾದರೆ ನಗರದ ಬೆಂಗಳೂರು ರಸ್ತೆಯತ್ತ ಒಂದು ಕಣ್ಣಾಯಿಸಿದರೂ ಸಾಕು., ಜನರ ಓಡಾಟಕ್ಕೆ ಒಂದಿಂಚೂ ಜಾಗ ಬಿಡದೆ ಅಂಗಡಿಯಲ್ಲಿನ ಸಾಮಗ್ರಿಗಳನ್ನು ಫುಟ್‌ಪಾತ್‌ನಲ್ಲಿರಿಸುವ ಅಂಗಡಿ ಮಾಲೀಕರು, ರಾಜಾರೋಷವಾಗಿಯೇ ಪಾಲಿಕೆಯ ಆಡಳಿತಕ್ಕೆ ಸಡ್ಡು ಹೊಡೆದಿದ್ದಾರೆ. ಪಾದಚಾರಿಗಳಿಗೆ ಆಗುವ ತೊಂದರೆ ಕುರಿತು ಸಾರ್ವಜನಿಕರು ಏನಾದರೂ ಅಂಗಡಿ ಮಾಲೀಕರ ಮೇಲೆ ತಗಾದೆ ತೆಗೆದರೆ, "ಮಹಾನಗರ ಪಾಲಿಕೆಯವರೇ ಬಾಯಿಮುಚ್ಚಿ ಕುಳಿತಿದ್ದಾರೆ. ನಿನ್ನದೇನು? " ಎಂದು ಕಾರವಾಗಿ ಪ್ರತಿಕ್ರಿಯಿಸುತ್ತಾರೆ.
ಹಾಗಂತ ಪಾದಚಾರಿ ರಸ್ತೆಯ ಅತಿಕ್ರಮಣದ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತುತ್ತಿಲ್ಲ ಎಂದೇನಿಲ್ಲ. ಅನೇಕ ಸಂಘಟನೆಗಳು ಫುಟ್‌ಪಾತ್ ತೆರವು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಹೋರಾಟಗಳನ್ನು ನಡೆಸಿದ್ದಾರೆ. ಹತ್ತಾರು ಬಾರಿ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದಾರೆ. ಆದರೆ, ಹೋರಾಟಗಾರರಿಗೆ ಶೀಘ್ರವೇ ಕ್ರಮ ವಹಿಸುವ ಭರವಸೆ ಬಿಟ್ಟರೆ ಉಳಿದಂತೆ ಯಾವ ಪ್ರಯೋಜನವೂ ಆಗಿಲ್ಲ.ಬಳ್ಳಾರಿಯಲ್ಲಿ ಫುಟ್‌ಪಾತ್‌ಗಳು ಸಾರ್ವಜನಿಕರಿಗೆ ಅನುಕೂಲವಾಗುವ ಬದಲು ಸಮಸ್ಯೆಯಾಗಿ ಪರಿಣಮಿಸಿವೆ. ಪಾದಚಾರಿಗಳಿಗೆ ಸುರಕ್ಷಿತ ನಡೆಪಥ ಕಲ್ಪಿಸಲು ಹಾಗೂ ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡಲು ಪಾಲಿಕೆ ಹಾಗೂ ಜಿಲ್ಲಾಡಳಿತ ಯಾವ ಕ್ರಮ ವಹಿಸಲಿದೆ ಎಂಬುದೇ ಸಾರ್ವಜನಿಕರ ವಲಯದಲ್ಲಿ ಸದ್ಯಕ್ಕಿರುವ ಪ್ರಶ್ನೆ.
ರಂಜಾನ್ ಹಬ್ಬದ ಬಳಿಕ ಫುಟ್‌ಪಾತ್ ತೆರವು ಕ್ರಮ ವಹಿಸುವ ನಿರ್ಧಾರ ಕೈಗೊಂಡಿದ್ದೆವು. ಹಬ್ಬ ಮುಗಿದಿದೆ. ಅಧಿಕಾರಿಗಳ ಜತೆ ಚರ್ಚಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ.