ಪಾಂಡವಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒತ್ತುವರಿಯಾಗಿದ್ದ ಪಾದಚಾರಿ ಮಾರ್ಗವನ್ನು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಹಾಗೂ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಪಾಂಡವಪುರ:

ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಫುಟ್ ಪಾತ್ ಜಾಗವನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒತ್ತುವರಿಯಾಗಿದ್ದ ಪಾದಚಾರಿ ಮಾರ್ಗವನ್ನು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಹಾಗೂ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಪಟ್ಟಣದ ಹಿರೇಮರಳಿ ಆಟೋ ವೃತ್ತದಿಂದ ಪ್ರಾರಂಭಗೊಂಡು ಡಾ.ರಾಜಕುಮಾರ್ ವೃತ್ತದವರೆಗೆ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆಯಿತು. ಅಂಗಡಿ-ಮುಂಗಟ್ಟುಗಳ ಕೆಲ ಮಾಲೀಕರು ಒತ್ತುವರಿ ತೆರವಿಗೆ ತಡೆ ಒಡ್ಡಿದರಾದರೂ ಪುರಸಭೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.

ಪಟ್ಟಣದ ಚರ್ಚ್ ಬಳಿ ಒತ್ತುವರಿಯಾಗಿರುವ ಫುಟ್ ಪಾತ್ ಸೇರಿದಂತೆ ಪಟ್ಟಣದ ಇತರೆಡೆ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸದೆ ರಾಜಕೀಯ ಪ್ರದರ್ಶನ ಮಾಡಲಾಗುತ್ತಿದೆ ಎಂದು ಹಿರೇಮರಳಿ ಸತೀಶ್ ಹಾಗೂ ಇತರೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಆರೋಗ್ಯ ನಿರೀಕ್ಷಕ ಮಂಜುನಾಥ್, ಸಿಬ್ಬಂದಿ ನಾಗೇಶ್, ಮಧು, ಗಣೇಶ್, ಕನ್ನಡ ಸೇನೆ ಅಧ್ಯಕ್ಷ ಸಿ.ದೇವ ಸೇರಿದಂತೆ ಇತರರಿದ್ದರು.

ದ್ವೇಷ ಮಸೂದೆಯಿಂದ ಸಾಂವಿಧಾನಿಕ ಕಳವಳ: ಸಿ.ಟಿ.ಮಂಜುನಾಥ್

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಳಗಾವಿ ಅವೇಶನದಲ್ಲಿ ಇತ್ತೀಚೆಗೆ ಅಂಗೀಕೃತಗೊಂಡ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ-೨೦೨೫ ಗಂಭೀರ ಸಾಂವಿಧಾನಿಕ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಮೌಲ್ಯಮಾಪನ ಮಾಡುವ ಮತ್ತು ಶಿಕ್ಷೆ ವಿಧಿಸುವ ವಿಶಾಲವಾದ ಅಧಿಕಾರ ನೀಡುವಂತಹ ಈ ಮಸೂದೆಯು ಸರ್ಕಾರಿ ಅಧಿಕಾರಿಗಳಿಗೆ ಜನರು ಯಾವ ರೀತಿ ಮಾತನಾಡಲು ಅನುಮತಿಸಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸರ್ಕಾರದ ವಿರೋಧಿ ಧ್ವನಿಗಳನ್ನು ಮುಚ್ಚಿಹಾಕುವ ಸಾಧನವಾಗಿ ಪರಿವರ್ತನೆಗೊಂಡಂತಾಗಿರುವ ಈ ಮಸೂದೆಯಲ್ಲಿ ಯಾವುದು ಇರಬಾರದೋ ಅಂತಹುಗಳನ್ನು ಅಳವಡಿಸುವ ಮೂಲಕ ಕಾನೂನುಗಳು ಅಸ್ಪಷ್ಟತೆಯಿಂದ ಕೂಡಿರುವಂತೆ ಮಾಡಿದೆ ಎಂದು ದೂರಿದ್ದಾರೆ.

ಈ ಕಾಯಿದೆ ಸಾರ್ವನಿಕ ಹಿತಾಸಕ್ತಿಗೆ ಧಕ್ಕೆ ತರುವಂತಹುದ್ದಾಗಿದ್ದು, ಸರ್ಕಾರದ ವಿರುದ್ಧ ಮಾತನಾಡುವವರನ್ನು ದಮನ ಮಾಡುವಂತಹ ಅಂಶಗಳನ್ನು ಅಡಕ ಮಾಡಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಕುಂದುಂಟು ಮಾಡುವಂತಾಗಿದೆ ಎಂದು ತಿಳಿಸಿದ್ದಾರೆ.

ಸಂವಿಧಾನದಲ್ಲಿ ಖಾತರಿ ಪಡಿಸಿದ ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಧಕ್ಕೆ ಬೀಳುತ್ತದೆ. ಅಸೌಹಾರ್ದತೆ, ದ್ವೇಷ, ಅಸ್ಪಷ್ಟ ಧ್ವನಿಗಳನ್ನು ಪೂರ್ವಾಗ್ರಹಪೀಡಿತ ಹಿತಾಸಕ್ತಿ ಎಂಬ ಬಳಕೆಯಾಗಿವೆ. ಇವುಗಳ ಅರ್ಥ ಸ್ಪಷ್ಟವಿಲ್ಲದ ಕಾರಣ ಸರ್ಕಾರಿ ಅಕಾರಿಗಳು ತಮ್ಮ ಇಚ್ಛೆಯಂತೆ ಬಳಸಿಕೊಳ್ಳಬಹುದು. ಇದು ಸಾಧನವಾಗಿ ಬಳಕೆ ತಾರತಮ್ಯ ಮತ್ತು ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.